Sunday, September 19, 2021

ಗುಬ್ಬಿ ಮತ್ತು ಮುಂಬೈ

ಬೆಂಗಳೂರಿನಲ್ಲಿ ಗುಬ್ಬಿಗಳೇ ಇಲ್ಲ. ಹೌದು ತುಂಬಾ ವರ್ಷಗಳೇ ಆದವು, ಗುಬ್ಬಿಗಳ ಸಂತತಿ ನಶಿಸಿ ಹೋಗಿ. ಮೊಬೈಲ್ ಬಂದಮೇಲೇನೆ ಹೀಗೆಲ್ಲ ಆಗಿರೋದು. ಮೊಬೈಲ್ ಟವರ್, ಮೊಬೈಲ್‌ನಿಂದ ಬರುವ ತರಂಗಗಳು ಅವುಗಳ ಅವನತಿಗೆ ಕಾರಣ.

ಇದೆ ಅಲ್ಲವೇ ಎಲ್ಲರೂ ಹೇಳಿದ್ದು, ಹೇಳುತ್ತಿರುವುದು?

ಹೌದಾ? ನಿಜವಾಗಿಯೂ ಗುಬ್ಬಿಗಳೇ ಇಲ್ಲವೇ? 

ನಾವಂತೂ ನಮ್ಮ ಮನೆಯ ಸುತ್ತ ಮುತ್ತ ಗುಬ್ಬಿಗಳನ್ನು ನೋಡಿ ವರ್ಷಗಳೇ ಆಗಿದೆ. ಎಲ್ಲೋ ಅಪರೂಪಕ್ಕೆ ಒಮ್ಮೆ ಮನೆಯ ಬಳಿ ಬಂದ ಎರಡೇ ಎರಡು ಗುಬ್ಬಿಗಳನ್ನು ನೋಡಿ ಬಹಳ ಸಂತಸ ಪಟ್ಟು, ಫೋಟೋ ತೆಗೆಯಲು ವಿಫಲ ಪ್ರಯತ್ನ ನಡೆಸಿದ್ದೆ. 

ಅಮೇಲಂತೂ  ನೋಡೇ ಇಲ್ಲ. ಗುಬ್ಬಿಗಳೇ ಏಕೆ, ಕಾಗೆಗಳೂ ಸಹ ಅಷ್ಟಾಗಿ ಕಾಣಸಿಗುವುದಿಲ್ಲ. ಬಹಳ ಅಪರೂಪ.

ಶ್ರಾದ್ಧ ಕರ್ಮ ಮಾಡಿ ಪಿಂಡ ಇಟ್ಟು ಕಾಗೆಗಳಿಗೆ ಕಾದರೆ ಬರುವುದು ಕೇವಲ ಪಾರಿವಾಳಗಳು. 

ಯಾರೋ ಹೇಳಿದರು, ಪಾರಿವಾಳಗಳು ಇದ್ದ ಕಡೆ ಕಾಗಗಳಿಗೆ ಉಳಿಗಾಲವಿಲ್ಲ ಎಂದು. ಎಷ್ಟು ನಿಜವೋ ಗೊತ್ತಿಲ್ಲ, ಆದರೆ ಪಾರಿವಾಳಾಗಳಿರುವಷ್ಟು ಕಾಗೆಗಳಂತೂ ಇಲ್ಲ.

ಹಾಗಿದ್ದರೆ ಗುಬ್ಬಿಗಳೂ ಸಹ ಇದೆ ಕಾರಣಕ್ಕೇನಾದರೂ ಕಣಸಿಗುತ್ತಿಲ್ಲವೋ ಅಥವಾ ನಿಜವಾಗಿಯೂ ಮೊಬೈಲ್‌ನ ಹಾವಳಿಯಿಂದಲೋ ?

ಆದರೆ ನಾನು ಕೊಲ್ಲಾಪುರಕ್ಕೆ ಹೋದಾಗ, ಪುಣೆಗೆ ಹೋದಾಗ ಅಥವಾ ಪ್ರತೀ ವರ್ಷ ಮುಂಬೈಗೆ ಹೋದಾಗ ಬಹಳಷ್ಟು ಗುಬ್ಬಿಗಳನ್ನು ನೋಡುತ್ತಿದ್ದೆ. ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಚಿವ್ಗುಟ್ಟುತ್ತಾ ಹಾರಾಡುತ್ತಿರುತ್ತಿತ್ತು. ಹಾಗಾದರೆ ಅಲ್ಲೆಲ್ಲ ಮೊಬೈಲ್ಗಳೇ ಇಲ್ಲವೇ? ಖಂಡಿತ ಅಲ್ಲ. ಕೊಲ್ಲಾಪುರ ಏನೋ ಚಿಕ್ಕ ಊರು ಮೊಬೈಲ್‌ನ ಬಳಕೆ ಕಡಿಮೆ ಇರಬಹುದು ( ಈಗ ಸಣ್ಣ ಸಣ್ಣ ಹಳ್ಳಿಗಳೂ ಸಹ ಮೊಬೈಲ್ ಹಾಗೂ ಮೊಬೈಲ್ ಟವರ್ನ  ಹೊರತಾಗಿಲ್ಲ) ಆದರೆ ಪುಣೆ ಹಾಗೂ ಮುಂಬೈ? ಅಲ್ಲಿನ ಜನಸಂಖ್ಯೆ ನಮ್ಮಲ್ಲಿಗಿಂತಲೂ ಅಧಿಕ. ಆ ಕಾರಣಕ್ಕಾಗಿ ಮೊಬೈಲ್‌ನ ಉಪಯೋಗವೂ ಅಧಿಕ. ಮತ್ತೇಕೆ ಅಲ್ಲಿ ಗುಬ್ಬಿಗಳಿಗೆ ತೊಂದರೆ ಆಗಿಲ್ಲ? 

ಪಾರಿವಾಳಗಳೂ ಸಹ ಅಧಿಕವಾಗೆ ಇವೆ. ಕಾಗೆಗಳು ಸ್ವಲ್ಪ ಕಡಿಮೆಯೇ.

ಮೊನ್ನೆ ಮುಂಬೈಗೆ ಬಂದಾಗ ಗಮನಿಸಿದ್ದು ಮತ್ತಷ್ಟು ಗುಬ್ಬಿಗಳ ವೃದ್ದಿ. ನೋಡಿ ಬಹಳ ಸಂತಸವಾಯಿತು, ಫೋಟೋ ತೆಗೆದೆ, ವೀಡಿಯೋ ಮಾಡಿಕೊಂಡೆ. 

ಹಾಗಿದ್ದರೆ ಮುಂಬೈನಂತ ಮಹಾನಗರಿಯಲ್ಲಿ ಗುಬ್ಬಿಗೇನು ಸವಲತ್ತುಗಳಿವೆ? 

ಅಲ್ಲಿಯವರೇನು ಅದಕ್ಕಂತ ಹೊಸದಾಗಿ ಊಟ ಉಪಚಾರ ಮಾಡುವವರಲ್ಲ, ಕಾಳು ಕಡಿ ಹಾಕುವುದಿಲ್ಲ. 

ಅಲ್ಲಿನ ಒಂದೇ ಒಂದು ಮುಖ್ಯ ಪರಿಸರ ಎಂದರೆ ಅಲ್ಲಿನ ಹಳೇ ಕಟ್ಟಡಗಳು.

ಹೌದು, ಗುಬ್ಬಿಗಳು ಇತರೇ ಪಕ್ಷಿಗಳಂತೆ ಗೂಡು ಕಟ್ಟುವುದಿಲ್ಲ (ಮೊನ್ನೆ ಎಲ್ಲಿಯೋ ಓದಿದಾಗ ಗಮನಕ್ಕೆ ಬಂದಿದ್ದು, ಬಹುಶಃ ಪೂಚಂತೇ ಅವರ ಯಾವುದೋ ಪೇಜ್‌ನಲ್ಲಿ). ಅವು ಕೇವಲ ಸಂಧಿ, ಮಾಡಗಳಲ್ಲಿ ಹುಲ್ಲು ಕಡ್ಡಿ ಹತ್ತಿಯನ್ನಿಟ್ಟು ಗೂಡು ಮಾಡಿಕೊಳ್ಳುತ್ತವಂತೆ. ಪಾರಿವಾಳಗಳು ಎಲ್ಲೆಂದರಲ್ಲಿ ಆರಾಮಾಗಿ ವಾಸಿಸಬಲ್ಲವು. ಹಳೇ ಕಟ್ಟಡವಾಗಲೀ, ಹೊಸದಿರಲಿ ಸ್ವಲ್ಪ ಜಾಗ ಸಿಕ್ಕರೆ ಸಾಕು. ಗುಬ್ಬಿಗಳಿಗೆ ಹಾಗಲ್ಲ. ಅವುಗಳಿಗೆ ಸಂಧಿ, ಗೋಡೆಯ ಅಥವಾ ಕಿಟಕಿಯ ಸಜ್ಜೆಯ ಯಾವುದೋ ಗೂಡು (ಮುಕ್ಕಾಲು ಭಾಗ ಮುಚ್ಚಿರುವಂತದ್ದು) ಇನ್ನಾವುದೋ ಹಂಚಿನ ಸಂಧು, ಸಿಮೆಂಟ್ ಶೀಟ್‌ನ ಕೆಳಭಾಗ ಹೀಗೆ. 

ಮುಂಬೈನಂತಹ ಮಹಾನಗರ ಎಷ್ಟೇ ಬೆಳದಿದ್ದರೂ, ಅಲ್ಲಿ ಈಗಲೂ ಹಳೇ ಕಟ್ಟಡಗಳಿಗೆ ಕೊರತೆಯಿಲ್ಲ. ಪ್ರತೀ ಹೊಸ ಕಟ್ಟಡದ ಪಕ್ಕದಲ್ಲಿ ಹತ್ತಿಪ್ಪತ್ತು ಹಳೇ ಕಟ್ಟಡಗಳೂ, ಒಂದೆರಡು ಗುಡಿಸಲುಗಳೂ ಇದ್ದೇ ಇದೆ. ಇನ್ನು ಎಲ್ಲಾ ರೈಲು ನಿಲ್ದಾಣಗಳಲ್ಲಿ, ಹಳೇ ಅಂಗಡಿಗಳಲ್ಲಿಯೂ ಸಹ. ಗುಬ್ಬಿಗಳಿಗೆ ಅದು ಪ್ರಶಸ್ತ ಜಾಗ. 

ಹೀಗಾಗಿ ಅಂತಹ ಮಹಾನಗರ, ಅಷ್ಟೊಂದು ಜನಸಂಖ್ಯೆ, ಅಷ್ಟೊಂದು ಪಾರಿವಾಳಗಳ ನಡುವೆಯೂ ಗುಬ್ಬಿಗಳಿಗೆ ಬರ ಇಲ್ಲ. ಸಾವಿರಾರು, ಲಕ್ಷಗಳ ಸಂಖ್ಯೆಯಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡಿವೆ. 

ಅದೇ ಬೆಂಗಳೂರು ಬೆಳೆದಿದ್ದು ಇತ್ತೀಚೆಗೆ, ಹೊಸ ಹೊಸ ಬಡಾವಣೆ, ಹೊಸ ಕಟ್ಟಡಗಳು. ಅಷ್ಟೇ ಅಲ್ಲದೆ ಇಲ್ಲಿ ಅಪಾರ್ಟ್ಮೆಂಟ್ನ ಪದ್ದತಿಯೂ ಸಹ ಇತ್ತೀಚಿನ ವರ್ಷಗಳಲ್ಲಿ ಶುರುವಾದದ್ದು, ಅದೂ ಸಹ ಹೊಸ ಅವತಾರಗಳಲ್ಲಿ. ಇಲ್ಲಿನ ಮನೆಗಳಲ್ಲಿ ಕಾಂಕ್ರೀಟ್‌ನ ಸಜ್ಜೆಗಳೇ ಹೆಚ್ಚು. ಮುಂಬೈನಲ್ಲಿ ಕಬ್ಬಣದ ಗ್ರಿಲ್‌ಗಳನ್ನು ಮಾಡಿ ಶೀಟ್ ಹಾಕಿಬಿಡುತ್ತಾರೆ. ಹಾಗೂ ಅಲ್ಲಿ ಅಪಾರ್ಟ್‌ಮೆಂಟ್‌ಗಳು ೪೦-೪೫ ವರ್ಷಗಳಿಗೂ ಹಳೆಯದು.  ಹೀಗಾಗಿ ಗುಬ್ಬಿಗಳಿಗೆ ಮುಂಬೈನಂತ ಮಹಾನಗರಗಳು ಹೇಗೆ ಒಗ್ಗಿದೆಯೋ ಹಾಗೆ ಬೆಂಗಳೂರು ಒಗ್ಗಿಲ್ಲ. 

ಬಹುಶ ಹಳೇ ಬೆಂಗಳೂರು ಅಂದರೆ ಮೆಜೆಸ್ಟಿಕ್, ಚಿಕ್ಕಪೇಟೆ, ಮಲ್ಲೇಶ್ವರದ ಮಾರುಕಟ್ಟೆ ಈ ಜಾಗಗಳಲ್ಲಿ ಗುಬ್ಬಿಗಳು ಕಾಣಸಿಗಬಹುದು, ಆದರೂ ಕಡಿಮೆಯೇ. 

ಒಟ್ಟಿನಲ್ಲಿ ಮೊಬೈಲ್ ಹಾಗೂ ಮೊಬೈಲ್ ಟವರ್‍ನಿಂದ ಅನ್ನುವುದಂತೂ ಸತ್ಯಕ್ಕೆ ದೂರವಾದ ಮಾತು. 






Tuesday, May 23, 2017

ನಾನೂ, ಬಸ್ಸು ಮತ್ತು ಲೇಡೀಸ್

ಬಸ್ಸಿನಲ್ಲಿ ಪ್ರಯಾಣ ಮಾಡಿ ಬಹಳ ದಿನಗಳೇ ಆಗಿದ್ದವು, ನಾನು ಹೇಳುತ್ತಿರುವುದು ಸಿಟಿ ಬಸ್ಸಿನಲ್ಲಿ.
ಮೊನ್ನೆ ಮುಂಬೈ ಹೋಗುವಾಗ, ಮನೆಯಿಂದ ಸಿಟಿ ಬಸ್ಸಿನಲ್ಲೇ ನಾನೂ ನನ್ನಾಕೆ ಮೆಜೆಸ್ಟಿಕ್‌ಗೆ ಹೋದೆವು.
ಆಗಲೇ ಅನ್ನಿಸಿದ್ದು, ಇದನ್ನು ನಿಮಗೆಲ್ಲ ಹೇಳಬೇಕೆಂದು. ಅದಕ್ಕೂ ಮುಂಚೆ ತಡೆಯಲಾರದೆ ನನ್ನಾಕೆಗೆ ಹೇಳಿದೆ, ಹೇಳಿ ಬೈಸಿಕೊಂಡೆ.

ಹೌದು, ಏಕೋ ಏನೋ, ಬಸ್ಸಿನಲ್ಲಿ ಕೂತು ಪ್ರಯಾಣ ಮಾಡುವಾಗ ಯಾವುದೇ ಹುಡುಗಿ, ಹುಡುಗಿಯರನ್ನು ನೋಡಲಿ, ಎದೆಯಲ್ಲಿ ಏನೋ ಒಂದು ತರ ಢವ ಢವ, ಒಂಥರಾ ಕಸಿವಿಸಿ, ಒಂಥರಾ ಮೈ ನಡುಗತ್ತೆ.
ಮೊನ್ನೆ ಆದದ್ದೂ ಅದೇ. ಅದನ್ನೇ ನನ್ನಾಕೆಗೆ ಹೇಳಿ ಬೈಸಿಕೊಂಡೆ. ಪಕ್ಕದಲ್ಲಿ ಆಕೆ ಕೂತಿದ್ದರೂ ಹಾಗೇಕೆ? ಅದು ಹಾಗೇನೇ.

ನಾನು ನನ್ನ ೧೦ನೇ ವಯಸ್ಸಿನಲ್ಲೇ, ಸ್ವತಂತ್ರ್ಯವಾಗಿ ಬಸ್ಸಿನಲ್ಲಿ ಓಡಾಡಲು ಪ್ರಾರಂಭಿಸಿದೆ. (ಈಗಿನವರು ಇನ್ನೂ ಸಣ್ಣ ವಯ್ಯಸ್ಸಿನಲ್ಲೇ ಬಸ್ಸು, ರೈಲು, ವಿಮಾನಯಾನ ಮಾಡಿರಬಹುದು, ಆದರೆ ನಮ್ಮಮ್ಮನಿಗೆ ನಾನು ಮಾಡಿದ್ದು ಮಾತ್ರ ಒಂದು ಸಾಹಸ, ನನ್ನ ಪ್ರತಿ ದಿನದ ಪ್ರಯಾಣ ಒಬ್ಬ ಯೋಧನ ದಿನಕ್ಕಿಂತಲೂ ಹೆಚ್ಚು. ಈಗಲೂ ಅದನ್ನು ಬಂದವರೆದುರು ಹೇಳಿ ನನ್ನ ಗುಣಗಾನ ಮಾಡುತ್ತಲೇ ಇರುತ್ತಾರೆ).  ನನ್ನ ಶಾಲೆ ಮನೆಯಿಂದ ೧೦ ಕಿ ಮೀ ದೂರ, ಎರೆಡೆರಡು ಬಸ್ಸು ಬದಲಾಯಿಸಿ ನಾನೂ ನನ್ನ ಅಕ್ಕ ಹೋಗುತ್ತಿದ್ದೆವು. ನಾವಷ್ಟೇ ಅಲ್ಲ, ನಮ್ಮಂತೆ ಸಾವಿರಾರು ಜನ ಬಸ್ಸಿನ ಪ್ರಯಾಣ ಮಾಡುತ್ತಿದ್ದರು, ಈಗಲೂ ನಿತ್ಯ ಮಾಡುತ್ತಾರೆ.

ಆಗಲೂ ಅಷ್ಟೇ, ಹೌದು ಅದೇ ವಿಷಯಕ್ಕೆ ಬಂದೆ, ಬಸ್ಸಿನಲ್ಲಿ ಕೂತು ಪ್ರಯಾಣ ಮಾಡುವಾಗ ಯಾರಾದರೂ ಹುಡುಗಿಯರು ಬಂದರೆ ಸಾಕು, ಮೈಯ್ಯೆಲ್ಲಾ ಕಂಪನ, ಒಂಥರಾ ಢವ ಢವ ಎದೆಯಲ್ಲಿ. ಹುಡುಗಿಯರಲ್ಲಿ ಮತ್ತೆ ವಯ್ಯಸ್ಸಿನ ಬೇಧವಿಲ್ಲ. ಸಣ್ಣವರಿದ್ದರೂ ಹಾಗೆ ದೊಡ್ಡವರಾದರೂ ಅಷ್ಟೇ. ಆಗಿಂದನೇ ಶುರುವಾಗಿದ್ದು.
ಮುಂಚೆ ಇನ್ನೂ ಸಣ್ಣಾವನಿದ್ದಾಗಲೂ ಬಸ್ಸಿನಲ್ಲಿ ಹೋಗುತ್ತಿದೆ, ಅಮ್ಮ ಅಪ್ಪನ ಜೊತೆಯಲ್ಲಿ , ಆಗೆಲ್ಲಾ ಹೀಗಾಗಿರಲಿಲ್ಲ.(ಹೌದು, ನನಗಿನ್ನೊ ಚೆನ್ನಾಗಿ ನೆನಪಿದೆ).

ಪ್ರೌಢಶಾಲೆಯ ಅವಧಿಯಲ್ಲಿ ಹೆಚ್ಚು ಬಸ್ಸಿನಲ್ಲಿ ಓಡಾಡಲಿಲ್ಲ, ಸೈಕಲ್ಲಿನಲ್ಲಿ ಹೋದದ್ದೇ ಹೆಚ್ಚು. ಆದರೂ, ಅಪರೂಪಕ್ಕೆ ಬಸ್ಸಿನಲ್ಲಿ ಕೂತು ಹೋಗುವಾಗ ಹೀಗೆ ಆಗುತ್ತಿದ್ದುದುಂಟು.

ಇನ್ನು ಕಾಲೇಜಿನಲ್ಲಿಯೂ ಸಹ ಆಗಾಗ ಬಸ್ಸಿನಲ್ಲೇ ಹೋಗುತ್ತಿದ್ದೆ. ವಯಸ್ಸೂ, ಜವಾಬ್ದಾರಿ, ಎರಡೂ ಹೆಚ್ಚಿತ್ತು. ಆಗ ಯಾರಾದರೂ ಹುಡುಗಿಯರು ಬಂದರೆ ಮೊದಲಿಗಿಂತ ಹೆಚ್ಚು ನಡುಕ (ನಡುಕ ಅನ್ನುವುದಕ್ಕಿಂತ ಅದೊಂಥರಾ ಕಂಪನ ಎಂದಷ್ಟೇ ಹೇಳಬಹುದು) ಉಂಟಾಗುತ್ತಿತ್ತು. ಕೆಲವೊಮ್ಮೆ ಯಾವುದಾದರೂ ನಿಲ್ದಾಣ ಹತ್ತಿರವಾಗುತ್ತಿದೆ ಎಂದರೇ ಸಾಕು, ಆಗಲೇ ಢವ ಢವ ಶುರು ಆಗಿ ಬಿಡುತ್ತಿತ್ತು.
ಇಲ್ಲೂ ಅಷ್ಟೇ, ಹುಡುಗಿಯರ ವಯ್ಯಸ್ಸಿನಲ್ಲಿ ಬೇಧವಿರಲಿಲ್ಲ. ಕೆಲವೊಮ್ಮೆ ಹೆಂಗಸರು ಬಂದರೂ ಹೀಗೇ ಆಗಲು ಶುರುವಾಯಿತು. ಅಷ್ಟೇ ಏಕೆ ಮುದುಕಿಯರನ್ನು (ಕ್ಷಮಿಸಿ, ವಯಸ್ಸಾದ ಹೆಂಗಸರು) ನೋಡಿದಾಗಲೂ ಇದು ಹೀಗೇನೆ. ಎನ್ಮಾಡಲಿ ನಾನು ಬೆಳೆದು ಬಂದ ವಾತಾವರಣವೇ ಹಾಗಿತ್ತು.

ಕಾಲೇಜು ಮುಗಿದ ಮೇಲೆ, ಬಸ್ಸಿನ ಪ್ರಯಾಣವೇ ಕಡಿಮೆಯಾಯಿತು, ಬಹುಶಃ ನಿಂತೇ ಹೋಯಿತು ಎನ್ನಬಹುದು. ಬೆಲ್ ಗೆ ಹೋಗುವಾಗ ಕಂಪನಿಯದ್ದೇ ಬಸ್ಸಿತ್ತು, ಆನಂತರ ನನ್ನದೇ ದ್ವಿಚಕ್ರ ವಾಹನ, ತದ ನಂತರ ಕಾರು. ಹೀಗೆ ಬಸ್ಸಿನ ಸಂಪರ್ಕ ಕ್ರಮೇಣ ನಿಂತೇ ಹೋಯಿತು. ತೀರಾ ಅಪರೂಪಕ್ಕೊಮ್ಮೆ ಬಸ್ಸಿನ ಪ್ರಯಾಣ, ನಂತರ ನನ್ನ ಢವ ಢವ....

ಕೆಲವೊಮ್ಮೆ ಬಸ್ಸಿನ ಪ್ರಯಾಣವೇ ಸುಖಕರ, ಒಂಥರಾ ಆನಂದ(ಢವ ಢವ ಅಲ್ಲ). ಟ್ರಾಫಿಕ್‌ನ ಕಿರಿ ಕಿರಿ ಇಲ್ಲ, ಮೈ ಕೈ ನೋವು, ಬೆನ್ನು ನೋವಿಲ್ಲ. ಧೂಳು, ಪೆಟ್ರೋಲ್ ದುಡ್ಡು ಅನ್ನುವಂತಿಲ್ಲ. ಬಿಸಿಲೇ ಇರಲಿ, ಮಳೆಯೇ ಇರಲಿ ಬಸ್ಸಿನ ಪ್ರಯಾಣ ಹೆಚ್ಚು ಅನುಕೂಲಕರ. ಈಗಲೂ ಲಕ್ಷಾಂತರ ಮಂದಿ ಬಸ್ಸನ್ನೇ ಅವಲಂಬಿಸಿರುತಾರೆ, ಅವರ ಬಳಿ ದುಡ್ಡಿಲ್ಲ, ಬೈಕು ಕಾರಿಲ್ಲ ಎಂದಲ್ಲ. ಅದೊಂದು ಅಭ್ಯಾಸ, ಅನಿವಾರ್ಯ, ಅನುಕೂಲ. ಅದಕ್ಕೇ, ಯಾವುದೇ ಬಸ್ಸು ನೋಡಿದರೂ ತುಂಬಿ ತುಳುಕುತ್ತಿರುತ್ತದೆ. ಅಪರೂಪಕ್ಕೆ ಖಾಲಿ ಎನಿಸಿದರೂ, ಸ್ವಲ್ಪ ಹೊತ್ತಿನಲ್ಲೇ ಜನ ಜಾತ್ರೆ.

ಮೊನ್ನೆಯೂ ಅಷ್ಟೇ. ನಾನು ನನ್ನಾಕೆ ಬಸ್ಸು ಹತ್ತಿದಾಗ ಬಹಳ ಖಾಲಿಯಿದ್ದ ಬಸ್ಸು, ಬರಬರುತ್ತಾ ತುಂಬುತ್ತಾ ಬಂತು. ಆಗಲೇ ಕೆಲವು ಹುಡುಗಿಯರು ಮುಂದಿನ ನಿಲ್ದಾಣದಲ್ಲಿ ಹತ್ತಿದರು. ಶುರು ಆಯಿತು ನೋಡಿ ಢವ ಢವ.
ಸಧ್ಯ ಹತ್ತಿದವರು ಮುಂದಿನ ಎರಡು ಆಸನದಲ್ಲೇ ಕೂತರು. ಮತ್ತೆ ಮುಂದಿನ ನಿಲ್ದಾಣದಲ್ಲಿ ಮತ್ತೆರಡು ಹುಡುಗಿಯರು, ಆಗಲೂ ಎದೆಯಲ್ಲಿ ಢವ ಢವ.
ಹೀಗಾಗುತ್ತಿದೆ ಎಂದು ಮಡದಿಗೆ ಹೇಳಿದಾಗ ಸ್ವಲ್ಪ ಮುನಿಸು, ಸ್ವಲ್ಪ ನಗು.
ಮತ್ತೆ ಮುಂದಿನ ನಿಲ್ದಾಣ ಬರುವ ಮುಂಚೆಯೇ ಢವ ಢವ ಶುರು ಆಗಿತ್ತು. ಎನಿಸಿದಂತೆಯೇ ಕೆಲವು ಹೆಂಗಸರು ಹತ್ತಿದರು. ನಾನು ನನ್ನ ಆಸನ ಬಿಟ್ಟು ಕೊಡಬೇಕಾಯಿತು(ಅಲ್ಲ, ಅವರದ್ದೇ ಅದು ಆಸನ- ಸೀಟು ಸ್ವಾಮಿ).
ನಾನು ಹಿಂದಿನ ಸೀಟು ಖಾಲಿಯಿಲ್ಲ ಎಂದು, ಹೆಂಡತಿಯ ಜೊತೆಗೆ ಮಹಿಳೆಯರಿಗೆ ಮೀಸಲಿರುವ ಆಸನದಲ್ಲೇ ಕೂತಿದ್ದೆ. ಅನಿವಾರ್ಯವಾಗಿ ಏಳಲೇ ಬೇಕಾಯಿತು.

ಮುಂಚೆಯೂ ಹೀಗೆ, ಹಿಂದಿನ ಸೀಟುಗಳು ಖಾಲಿ ಇಲ್ಲವೆಂದಾದರೆ, ಮುಂದಿರುವ ಮಹಿಳೆಯರಿಗೆ ಮೀಸಲಿರುವ ಸೀಟುಗಳಲ್ಲೇ ಕುಳಿತಿರುತ್ತಿದ್ದೆ. ಆದಷ್ಟೂ ಅವರಿಗೆ ಮೀಸಲಿರುವ ಆಸನಗಳಲ್ಲೇ ಕೊನೆಯ ಆಸನದಲ್ಲಿ ಕೂಡುತ್ತಿದ್ದೆ.
ಯಾರಾದರೂ ಹುಡುಗಿಯರು, ಹೆಂಗಸರು ಹತ್ತಿದರೆ, ಮೊದಲ ಸೀಟುಗಳಲ್ಲಿ ಕೂಡುತ್ತಿದ್ದರು. ಅದೂ ಭರ್ತಿಯಾದರೆ ಕೊನೆಯದಕ್ಕೆ ಬರುತ್ತಿದ್ದರು, ಇಲ್ಲ ನಾನೇ ಬಿಟ್ಟು ಕೊಡುತ್ತಿದೆ(ಚಿಕ್ಕವನಿದ್ದಾಗಲೂ).

ಅದಕ್ಕೆ, ಅವರ ಸೀಟಿನಲ್ಲಿ ಪ್ರಯಾಣ ಮಾಡುವಾಗ ಹುಡುಗಿಯರು, ಹೆಂಗಸರು ಬಂದರೆ ಒಂಥರಾ ಎದೆಯಲ್ಲಿ ಢವ ಢವ, ಸೀಟು ಬಿಡಬೇಕಲ್ಲಪ್ಪಾ ಎಂದು...ಅಷ್ಟೇ...

Wednesday, October 1, 2014

ನಾನೂ, ನನ್ನ ಉಳಿತಾಯ?



ಮೊನ್ನೆ ಆಫೀಸಿನಿಂದ ಹೊರಟಾಗ ಪೆಟ್ರೋಲ್ ರಿಸರ್ವ್ಗೆ ಬಂದಿತ್ತು. ಬೆಳಿಗ್ಗೆ ಹೊರಟಾಗ ಹಾಕಿಸಿದರಾಯಿತು ಎಂದು ಹಾಗೆ ಮನೆಗೆ ಹೋದೆ. ಎರಡು ನಿಮಿಷ ಪೆಟ್ರೋಲ್ ಹಾಕಿಸುವುದು ದೊಡ್ಡದಲ್ಲ, ಆದರೆ ಅದಕ್ಕೆ ದುಡ್ಡು ಬೇಕು, ಈಗ ಡೆಬಿಟ್ ಕ್ರೆಡಿಟ್ ಕಾರ್ಡ್ ಇರುವುದರಿಂದ ಕೈಯ್ಯಲ್ಲಿ ದುಡ್ಡಿರುವುದಿಲ್ಲ. ಹಾಗಂತ ದಾರಿಯಲ್ಲೇ ಇರುವ ATMಗೆ ಹೋಗಿ ದುಡ್ಡು ತೆಗೆಯಲು ಸೋಮಾರಿತನ.

ಬೆಳಿಗ್ಗೆ ಆಫೀಸಿಗೆ ಹೊರಡುವಾಗ ಮತ್ತೆ ಪೆಟ್ರೋಲ್ನ ನೆನಪಾಯಿತು. ಹೇಗಿದ್ದರೂ ನಿನ್ನೆ ತಾನೇ ರಿಸರ್ವ್ ಗೆ ಬಂದಿದೆ, ಇವತ್ತೊಂದಿನ ಆರಾಮಾಗೆ ಹೋಗಿ ಬರಬಹುದು ಎಂದು ಪೆಟ್ರೋಲ್ ಹಾಕಿಸದೆ ಹೋಗಿ ಬಂದೆ. ಸಂಜೆ ಮನೆಗೆ ಬರುವಾಗ ನೆನಪಾಯಿತು, ಆದರೆ? ಸೋಮಾರಿತನ, ನಾಳೆ ಹಾಕಿಸಿದರಾಯಿತು, ಸರಿ ಸೀದಾ ಮನೆಗೆ ಹೋದೆ.
ಸರಿ, ಇವತ್ತು ಬೆಳಿಗ್ಗೆ ಮತ್ತೆ ನೆನಪಾಯಿತು. ಪೆಟ್ರೋಲ್ ಹಾಕಿಸಲೇ ಬೇಕಿತ್ತು, ಇಲ್ಲಾಂದರೆ ದಾರಿಯಲ್ಲಿ ಕೈ ಕೊಡುವುದು ಖಂಡಿತ. ಆದರೆ - ಕಿಲೋಮೀಟರ್ಗೆ ತೊಂದರೆ ಏನಿಲ್ಲ. ಮನೆಯಿಂದ ಸ್ವಲ್ಪ ದೂರದಲ್ಲೇ ಪೆಟ್ರೋಲ್ ಬಂಕ್ ಇದೆ. ಆದರೆ ಕಾರ್ಡ್ನಲ್ಲಿ ಹಾಕಿಸಿದರೆ ೧೫ ರೂಪಾಯಿ ಹೆಚ್ಚು ಹೋಗತ್ತೆ, ಅದೇ ಮುಂದಿನ ಪೆಟ್ರೋಲ್ ಬಂಕ್ನಲ್ಲಿ ಹೆಚ್ಚುವರಿ ಹಣ ಇಲ್ಲ. ಸರಿ ಮನೆ ಬಳಿ ಇರೋ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸದೇ ಮುಂದೆ ಹೋದೆ. ಕೇವಲ ೧೫ ರೂಪಾಯಿ ಉಳಿಸಲಷ್ಟೇ ಅಲ್ಲ, ಮುಂದಿನ ಪೆಟ್ರೋಲ್ ಬಂಕ್ನಲ್ಲಿ ಹಾಕಿಸಿದರೆ ನನ್ನ ಕಾರ್ಡ್ಗೆ ಕೆಲವು ರಿವಾರ್ಡ್ ಅಂಕಗಳೂ ಸಹ ದೊರೆಯುತ್ತದೆ. ಆಯ್ತಲ್ಲ, ಎಲ್ಲ ಕಡೆಯಿಂದಲೂ ಲಾಭ.

ಆದರೆ ಆದದ್ದೇ ಬೇರೆ, ಕೈಲಿರುವ ಒಂದು ಹಕ್ಕಿ ಬಿಟ್ಟು ಮರದ ಮೇಲಿನ ಎರೆಡೆರೆದು ಹಕ್ಕಿಗಳಿಗೆ ಆಸೆ ಪಟ್ಟಂತಾಯಿತು. ಸಿಕ್ಕ ಪೆಟ್ರೋಲ್ ಬಂಕ್ ಬಿಟ್ಟು ಸುಮಾರು ಕಿಮೀ ಹೋದ ಮೇಲೆ ಪೆಟ್ರೋಲ್ ಖಾಲಿಯಾಗಿಬಿಟ್ಟಿತ್ತು. ವಿಧಿಯಿಲ್ಲ, ಗಾಡಿಯನ್ನು ತಳ್ಳಬೇಕು, ಇಲ್ಲ ಅಲ್ಲೇ ಬಿಟ್ಟು ಎಲ್ಲಿಂದಾದರೂ ಪೆಟ್ರೋಲ್ ತಂದು ಸುರಿಯಬೇಕು. ಮಧ್ಯಾಹ್ನ ೧೨ ಗಂಟೆ, ಕೆಟ್ಟ ಬಿಸಿಲು, ಬೆನ್ನ ಮೇಲೆ ಹೆಣಭಾರದ ಎರಡು ಲ್ಯಾಪ್ಟಾಪ್ ಬ್ಯಾಗ್. ಮುಂದಿನ ಅಥವಾ ಹಿಂದಿನ ಪೆಟ್ರೋಲ್ ಬಂಕ್ಗೆ ಹೋಗಬೇಕೆಂದರೆ ೧ಕಿಮೀ ಹೋಗಬೇಕು, ಗಾಡಿಯನ್ನು ತಾಳ್ಳುವುದಂತೂ ಅಸಾಧ್ಯದ ಮಾತು, ತಳ್ಳಬಹುದೇನೋ, ಆದರೆ ಆಮೇಲೆ ಆಫೀಸಿಗೆ ಹೋಗುವುದು ಕಷ್ಟ, ಬೆವರು, ಒದ್ದೆ, ಛೇ ಆಗದ ಮಾತು. ಸರಿ ಅಲ್ಲೇ ಗಾಡಿ ಬಿಟ್ಟು ಪೆಟ್ರೋಲ್ ತರೋಣವೆಂದರೆ, ಅದು ದಾರಿ ಮಧ್ಯ, ಯಾವುದಾದರೂ ಅಂಗಡಿ ಮುಂಗಟ್ಟು ಇದ್ದರೆ ಚನ್ನ, ಅದು ಇನ್ನೂ ದೂರ ಇದೆ, ಅಲ್ಲೇ ATM ಸಹ ಇದೆ. ಸರಿ ನನ್ನ ಕೋಣನನ್ನು ದೂಡಲು ಶುರು ಮಾಡಿದೆ. ಸಾಮಾನ್ಯ ದಿನಗಳಲ್ಲಿ ಅದು ನನ್ನ ಐರಾವತ, ಅಂಬಾರಿ, ಬಿಳಿ ಆನೆ. ಇಂಥ ಸಮಯದಲ್ಲಿ ಕೊಣವೇ ಸರಿ, ಅದೂ ಮಳೆ ಬಂದಾಗ ನಡೆಯುವ ಕೋಣ. ಕಷ್ಟಪಟ್ಟು ATM ತನಕ ದೂಡಿದೆ, ಯಾಕೆ ಬೇಕಿತ್ತು ಕಷ್ಟ, ೧೫ ರೂಪಾಯಿ ಹೆಚ್ಚು ಕೊಟ್ಟಿದ್ದರೆ ಇಷ್ಟೆಲ್ಲ ರಗಳೆಯೇ ಇರುತ್ತಿರಲಿಲ್ಲ, ಆದರೆ ಈಗ ವಿಧಿಯಿಲ್ಲ.

ಅಲ್ಲೇ ಗಾಡಿ ನಿಲ್ಲಿಸಿ, ATMನಿಂದ ದುಡ್ಡು ತೆಗೆದು ಆಟೋಗೆ ಕಾದು ನಿಂತೆ. ಪುಣ್ಯಕ್ಕೆ ಆಟೋ ಸಿಕ್ತು, ರೋಡಿನಲ್ಲಿ ಆಟೋ ಸಿಗಿವುದೆಂದರೆ, ಪುಕ್ಕಟೆಯಾಗಿ ಪುಣ್ಯ ಬಂದಂತೆ. ಆಟೋದವನು ಮೀಟರ್ ಹಾಕಲಿಲ್ಲ. ಕೇಳಿದ್ದಕ್ಕೆ, ಕೊಡಿ ಸಾರ್, ನಿಮಗೆ ಗೊತ್ತಲ್ಲ ಅಂದ ಯಾವುದೋ ಫೋನಿನ ಸಂಭಾಷಣೆ ನಡುವೆ. ಫೋನ್ ಇಟ್ಟ ನಂತರ ತಾನೇ ಮಾತು ಶುರು ಮಾಡಿದ. ತನ್ನ ಮಗಳನ್ನು ಭರತನಾಟ್ಯಕ್ಕೆ ಸೇರಿಸಿದ್ದಾನಂತೆ, ಅಲ್ಲಿ ಶುಲ್ಕ ಕೊಡುವುದು ತಡವಾಗಿದ್ದಕ್ಕೆ ಹೆಚ್ಚುವರಿ ಹಣ ಕೇಳಿದರಂತೆ. ನೋಡಿ ಸಾರ್, ನಾವಿಲ್ಲಿ ದುಡ್ಡು ಕಿತ್ತರೆ, ನಮ್ಮಿಂದ ಇನ್ನೊಬ್ಬರು ಆಗಲೇ ರೆಡಿ ಅಂದ. ಆಹಾ ಆಟೋದವರ ಬಾಯಲ್ಲಿ ನ್ಯಾಯದ ಮಾತೆ? ಸರಿ ಅವನಿಗೆ ೨೫ ರೂಪಾಯಿ ಕೊಟ್ಟು ಇಳಿದೆ. ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇತ್ತು. ಅವರ ಬಳಿಯೇ ಇದ್ದ ಒಂದು ಖಾಲಿ ಬಾಟಲ್ ತೆಗೆದುಕೊಂಡು ಅದರ ತುಂಬಾ ಪೆಟ್ರೋಲ್ ತುಂಬಿಸಿಕೊಂಡೆ. ಸಧ್ಯ ಬಾಟಲ್ ಇತ್ತು, ಇಲ್ಲಾಂದರೆ ಒಂದು ಬಿಸ್ಲೇರಿಗೆ ಹಣ ತೆತ್ತಬೇಕಾಗಿತ್ತು. ಮತ್ತೆ ಇನ್ನೊಂದು ಆಟೋ ಹಿಡಿದು(ಮತ್ತೊಮ್ಮೆ ಪುಣ್ಯ ಮಾಡಿದ್ದೆ), ಬೈಕ್ ಬಳಿ ಬಂದು ೨೫ ರೂಪಾಯಿ ಕೊಟ್ಟು ಇಳಿದೆ. ಪೆಟ್ರೋಲ್ ಬಗ್ಗಿಸಿ, ಒಮ್ಮೆ ಒದ್ದು, ಹೊರಟೆ. ದಾರಿಯಲ್ಲಿ ಖಾಲಿ ಬಾಟಲ್ ಕೊಟ್ಟು, ಇನ್ನೂ ಒಂದಿಷ್ಟು ಪೆಟ್ರೋಲ್ ಹಾಕಿಸಿ ಆಫೀಸಿಗೆ ಹೊರಟೆ. ೧೫ ರೂಪಾಯಿ ಉಳಿಸಲು, ಎಷ್ಟೆಲ್ಲ ಶ್ರಮ, ಹೆಚ್ಚುವರಿ ಹಣ ಪೋಲು ಮಾಡಿದೆ.

ಇದು ಬರೀ ಇವತ್ತಿನ ಕಥೆಯಲ್ಲ. ಪ್ರತೀ ಬಾರಿಯೂ ಅಷ್ಟೇ, ಏನೋ ಉಳಿಸಲು ಹೋಗಿ ಇನ್ನೆನನ್ನೋ ತೆತ್ತು ಬಂದಿರುತ್ತೀನೀ.
ಈ ಕ್ರೆಡಿಟ್ ಕಾರ್ಡುಗಳದ್ದೂ ಇದೆ ಕಥೆ. ಕೈಯಲ್ಲಿ ದುಡ್ಡಿದ್ದರೂ, ಏನೋ ಶೋಕಿ, ಕಾರ್ಡ್ ಬಳಸಿ ಬಿಡುತ್ತೀನಿ. ಶೋಕಿ ಅಂತಲ್ಲ, ಅದನ್ನು ಉಜ್ಜಿದರೆ ಇಂತಿಷ್ಟು ಅಂಕಗಳು ಸಿಗುತ್ತದೆ, ಆಮೇಲೆ ಅದರಿಂದ ಬೇರೇನಾದರೂ ತೋಗೋಬಹುದು ಅಂತ. ಸರಿ ಕಾರ್ಡ್ ಉಜ್ಜಿದ ತಕ್ಷಣ ಕೈಲಿರುವ ಹಣವನ್ನಾದರೂ ಬ್ಯಾಂಕ್‌ಗೆ ಕಟ್ಟುತ್ತೀನಾ, ಅದೂ ಇಲ್ಲ. ಕಟ್ಟುವ ಮುಂಚೆಯೇ, ಯಾವುದೋ ಮಾಯದಲ್ಲಿ ನಾನೇ ಖರ್ಚು ಮಾಡಿ ಬಿಟ್ಟಿರುತ್ತೀನಿ. ಸರಿ, ಈಗ ಆ ಕಾರ್ಡಿನ ಹಣ ಕೊಡುವುದಕ್ಕೆ ಬೇರೆ ಮಾರ್ಗ ಹುಡುಕಬೇಕು. ಕೆಡಿಮೆ ಕಟ್ಟುವುದಾದರೆ, ಸಂಬಳ ಬಂದ ತಕ್ಷಣ ಕಟ್ಟಿಬಿಡಬಹುದು. ಇಲ್ಲಾಂದ್ರೆ? ಇಲ್ಲಾಂದ್ರೆ ಏನು, ಇದಿಯಲ್ಲಾ ಸುಲಭ ಕಂತುಗಳು.
ಅದೂ ಸುಲಭ ಅಲ್ಲ, ಅದಕ್ಕೆ ಬಡ್ಡಿ ಕಟ್ಟಬೇಕು, ಸಂಸ್ಕರಣಾ ಶುಲ್ಕ ಕಟ್ಟಬೇಕು. ಆಯ್ತಲ್ಲ ಒಂದಕ್ಕೆ ಹತ್ತು ಪಟ್ಟು ಹೆಚ್ಚು ಖರ್ಚು. ಆದರೂ, ಈಗಲೂ ಕಾರ್ಡ್ ಬಳಸುವುದೇ ಹೆಚ್ಚು ಉಪಯುಕ್ತ ಎಂದೆನಿಸುತ್ತದೆ.

ಯಾವುದಾದರೂ ಮಾಲ್ಗಳಿಗೆ ಹೋದಾಗಲೂ ಅಷ್ಟೇ, ಚನ್ನಾಗಿ ಸುತ್ತಾಡಿ, ಕೊನೆಯಲ್ಲಿ ಏನಾದರೂ ತಿನ್ನೋಣವೆಂದರೆ ಅಲ್ಲಿ ಒಂದಕ್ಕೆ ಹತ್ತು ಪಟ್ಟು ಕೊಡಬೇಕು. ಹೆಂಡತಿ ಮಕ್ಕಳಿಗೆ ಬಟ್ಟೆ ಬರೆ ಕೊಂಡು, ಜೊತಗೆ ಬೇಕಿದ್ದೋ ಬೇಡದಿದ್ದೋ ಒಂದಷ್ಟು ಸರಕು ತೆಗೆದುಕೊಂಡ ನಂತರ, ಅಲ್ಲಿ ಊಟಕ್ಕೆ ಹೆಚ್ಚು ಕೊಡುವುದು ಯಾಕೋ ಮನಸಾಗುವುದಿಲ್ಲ. ಒಂದು ದೋಸೆಗೆ ೯೦ ರೂಪಾಯಿ ಕೊಡಲು ಯಾಕೋ ಹಿಂದೇಟು, ಹೇಗೋ ಒಪ್ಪಿಸಿ, ಹೊರಗೆ ತಿನ್ನೋಣವೆಂದು ಮಾಲ್ ನಿಂದ ಹೊರಬಂದು ಮನೆಯ ದಾರಿಯಲ್ಲಿ ಯಾವುದೇ ಒಳ್ಳೆಯ ಹೋಟೆಲ್‌ಗಳು ಸಿಗದಿದ್ದರೆ ನನ್ನ ಪಾಡು ಯಾರಿಗೂ ಬೇಡ. ಹೆಂಡತಿಯ ಸಿಟ್ಟು ತಾನಾಗೇ ಹೊರ ಬಂದಿರುತ್ತದೆ. ಅಮ್ಮನಿಗೂ ಮನೆಯಲ್ಲಿ ಏನಾದರೂ ಮಾಡಲು ಬೇಜಾರು. ಸರಿ ಮತ್ತೇನು ಮಾಡುವುದು? ನಾನೇ ಬೈಕಿನಲ್ಲಿ ಹೊರಗೆ ಹೋಗಿ ಏನಾದರೂ ತರಬೇಕು. ಇಲ್ಲ ಮನೆಗೇ ಏನಾದರೂ ತರಿಸೊಣ ಎಂದರೆ, ಪೀಜ಼ಾ ಬಿಟ್ಟು ಬೇರೆ ಏನೂ ಮನೆಗೆ ತಂದು ಕೊಡುವ ಸೌಲಭ್ಯವಿಲ್ಲ. ಸರಿ, ಪೀಜ಼ಾ ತರಿಸಲೇ ಬೇಕು, ಅದು ನೂರಿನೂರಕ್ಕೆ ಮುಗಿಯವ ಕೆಲಸವಲ್ಲ, ಅದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಕೊಡಲೇ ಬೇಕು, ಜೊತೆಗೆ ತಂದು ಕೊಟ್ಟವನಿಂಗೆ ಒಂಚೂರು ಭಕ್ಷೀಸು. ಅಮ್ಮ ಪೀಜ಼ಾ ತಿನ್ನುವುದಿಲ್ಲ ಅನ್ನೋ ಕಾರಣಕ್ಕೆ ಮತ್ತೆ ಬೈಕು ಏರಿ ಏನಾದರೂ ತರಬೇಕು.

ಹೀಗೆ ಎಲ್ಲೋ ಏನೋ ಉಳಿಸಲು ಹೋಗಿ, ಅದಕ್ಕಿಂತ ಹೆಚ್ಚು ಖರ್ಚು ಮಾಡಿಯಾಗಿರುತ್ತದೆ.
ಬಹುಷಃ ಇದು ನನ್ನೊಬ್ಬನದೇ ಕಥೆಯಲ್ಲ, ಬಹಳಷ್ಟು ಮಂದಿಯದು ಇದೇ ಹಣೆಬರಹ...

ಆದರೂ, ಆ ಎಲ್ಲ ಕ್ಷಣಗಳನ್ನು ಆನಂದಿಸುವುದು ಬಹಳ ಮುಖ್ಯ. ಇಷ್ಟು ಖರ್ಚು ಮಾಡಿದ್ದರೂ, ಮುಖದಲ್ಲಿನ ಮಂದಹಾಸಕ್ಕೇನು ಕಡಿಮೆ ಇಲ್ಲ, ಅದೂ ಅಲ್ಲದೆ, ಇಷ್ಟು ಖರ್ಚು ಮಾಡಿರದಿದ್ದರೆ, ಇದನ್ನು ಬರೆಯುವ ಅವಕಾಶವೂ ಇರುತ್ತಿರಲಿಲ್ಲ.



Tuesday, December 14, 2010

ನಾನೂ ನನ್ನ ಸಾವು

ಸಾವು ಎ೦ದ ಕೂಡಲೇ ಆ ಆಕ್ರ೦ದನ, ಸಾವಿನ ಮನೆ, ಸುತ್ತಾ ಅಳುತ್ತಾ ನಿಂತಿರುವ ಅವರ ಆಪ್ತರು, ಅವರ ಜೊತೆ ಕಳೆದ ಕ್ಷಣಗಳು, ಅವರೊ೦ದಿಗಿನ ಒಡನಾಟ ಹೀಗೆ ಒಬ್ಬೊಬ್ಬರಿಗೆ ಒ೦ದೊ೦ದು ಕಣ್ಣ ಮು೦ದೆ ಬ೦ದು ನಿಲ್ಲುತ್ತದೆ. ಅಯ್ಯೋ ಈಗಷ್ಟೇ ಇದ್ದವರು, ಇನ್ನೂ ಮು೦ದೆ ಇರುವುದಿಲ್ಲವಲ್ಲಾ ಎ೦ದು ಯೋಚಿಸಲು ಸಹ ಕೆಲವೊಮ್ಮೆ ಕಷ್ಟವಾಗುತ್ತದೆ. ಒಮ್ಮೊಮ್ಮೆ 'ಸಾವು' ಎನ್ನುವ ಆ ಎರಡಕ್ಷರ ಎಷ್ಟು ಭಯಾನಕ ಎ೦ದೆನಿಸಿಬಿಡುತ್ತದೆ, ಅದರಲ್ಲೂ ಅದು ಸ೦ಭವಿಸಿದ ರೀತಿ ಇನ್ನಷ್ಟು ಭಯಾನಕ ಎನ್ನುವ೦ತೆ ಮಾಡುತ್ತದೆ, ಸಾಮಾನ್ಯವಾಗಿ ಅದು ಅಪಘಾತ ಇಲ್ಲ ಆತ್ಮಹತ್ಯೆಯ೦ತಃ ಸ೦ದರ್ಭಗಳಲ್ಲೇ ಹೆಚ್ಚು. ಈ ಎರಡೂ ಸ೦ದರ್ಭಗಳಲ್ಲೂ ಸಾವಿಗೆ ತುತ್ತಾದವರ ಬಗ್ಗೆ ಮಾತನಾಡುವುದಕ್ಕಿ೦ತ, ಅದು ಸ೦ಭವಿಸಿದ ಬಗ್ಗೆ ಮಾತನಾಡುವುದೇ ಹೆಚ್ಕು. ವಾಹನ ಅಪಘಾತವಾಗಿದ್ದಾರೆ, 'ಅಬ್ಬಾ! ಅಷ್ಟೊ೦ದು ನೋವನ್ನು ಹೇಗೆ ತಾನೇ ಸಹಿಸಿಕೊ೦ಡಿದ್ದರೋ' ಎ೦ದು ಅನ್ನಿಸದೇ ಇರದು. ನೀರಿನಲ್ಲಿ ಮುಳುಗಿ ಸತ್ತಿದ್ದಾರೆ, 'ಆ ಉಸಿರುಗಟ್ಟಿಸುವಿಕೆ ಎಷ್ಟೊ೦ದು ಯಾತನಾದಾಯಕ' ಎ೦ದೂ ಅನಿಸುತ್ತದೆ. ಅದೇ ಆತ್ಮಹತ್ಯೆಯಾಗಿದ್ದಾರೆ(ಸಾಮಾನ್ಯವಾಗಿ ನೇಣು ಹಾಕಿಕೊ೦ಡಿದ್ದರೆ), 'ಅವರಿಗೆ ಅಷ್ಟೊ೦ದು ಧೈರ್ಯ ಹೇಗೆ ಬ೦ತು?' 'ನೋವಾಗಲಿಲ್ಲವೇ?' ಹೀಗೆಲ್ಲ ಪ್ರಶ್ನೆಗಳು ಮನದೊಳಗೆ ನುಸುಳುತ್ತದೆ.

ಸಾವು ನನಗೆ೦ದೂ ನೋವಿನ ಪಯಣ ಅನಿಸುವುದಿಲ್ಲ, ನಾವು ಹೊರಗಿನಿ೦ದ ನೋಡಿದರೆ ಅದು ಯಾತನಾದಾಯಕವೇ, ಆದರೆ ನನ್ನ ಪ್ರಕಾರ ಅದೇನು ಅಷ್ಟೊ೦ದು ತ್ರಾಸದಾಯಕ ಅಲ್ಲ. ಏಕೆ೦ದರೆ ನಾನಿಲ್ಲಿ ಕೊಟ್ಟಿರುವ ಅಷ್ಟೂ ನನ್ನ ಅನುಭವಕ್ಕೆ ಬ೦ದಿದೆ ಎ೦ದರೆ ನೀವದನ್ನು ನ೦ಬಲೇ ಬೇಕು. ಹಾ೦ ಇದೇನಪ್ಪಾ, ಇವನಿಗೇನು ಬ೦ದಿತ್ತು ಎ೦ದುಕೊಳ್ಳುವ ಮು೦ಚೆ ನಿಜ ಸ೦ಗತಿ ಏನೆ೦ದು ಹೇಳುವುದು ಒಳ್ಳೆಯದು. ಹೌದು, ಇವೆಲ್ಲಾ ನನ್ನ ಅನುಭವಕ್ಕೆ ಬ೦ದಿದ್ದು ನಿಜವಾದರೂ, ನೀರಿನಲ್ಲಿ ಮುಳುಗಿದ್ದು, ಸಣ್ಣ ಲಾರಿ ಅಪಘಾತವಾಗಿದ್ದು ಬಿಟ್ಟರೆ (ಇವೆರಡೂ ಬರೀ ಅನುಭವಕ್ಕೆ ಬ೦ದದ್ದು ಅಷ್ಟೇ) ಉಳಿದೆಲ್ಲವೂ ನಡೆದದ್ದು ಮಾತ್ರ ನನ್ನ ಕನಸಿನಲ್ಲಿ.

ಕನಸುಗಳೇ ಹಾಗೆ ವಿಚಿತ್ರವಾಗಿ, ಒ೦ದಕ್ಕೊ೦ದು ಸ೦ಭ೦ದವಿಲ್ಲದೇ, ಒ೦ದು ನಿರ್ದಿಷ್ಟವಾದ ಎಲೆ ಇಲ್ಲದೇ ಬ೦ದು ಹೋಗಿರುತ್ತದೆ. ದಿನಕ್ಕೆ ಏನಿಲ್ಲವೆ೦ದರೂ 20-25 ಕನಸುಗಳು ಬೀಳುತ್ತದ೦ತೆ, ಆದರೆ ನಮ್ಮ ನೆನಪಿನಲ್ಲುಳಿಯುವುದು ಒ೦ದೋ ಎರಡೋ ಮಾತ್ರ, ಕೆಲವೊಮ್ಮೆ ಅದೂ ಇಲ್ಲ. ಬೆಳಿಗ್ಗೆಯ ಯಾವುದೋ ಒ೦ದು ಕೆಲಸ, ಸ೦ಜೆ ಯಾರದ್ದೋ ಜೊತೆ ಮಾತನಾಡಿದ್ದು ಎಲ್ಲವೂ ಸೇರಿ ರಾತ್ರಿ ನಮ್ಮ ಕನಸಿನಲ್ಲಿ ಬ೦ದು, ಬೆಳಿಗ್ಗೆ ಎದ್ದಾಗ ಇಲ್ಲದ ಗೊ೦ದಲವನ್ನೂ ಉ೦ಟು ಮಾಡುತ್ತದೆ.

ಬಹುಶಃ ನಮ್ಮ ಮನಸಿನಲ್ಲಿ ಇರುವ ಎಲ್ಲಾ ವಿಚಾರಗಳು ರಾತ್ರಿ ನಮ್ಮ ಕನಸಿನಲ್ಲಿ ಸಭೆ ಸೇರುತ್ತವೆ೦ದು ಕಾಣುತ್ತದೆ, ಒ೦ದೊ ಎರಡೊ ವಿಚಾರವಾದರೆ ಬಹುಶಃ ಪರಿಹಾರವೂ ಸಿಗುತ್ತಿತ್ತೋ ಏನೋ, ಆದರೆ ನಾವು ಮನುಷ್ಯರು ಹಾಗಲ್ಲ, ನಮ್ಮ ವಿಚಾರವಲ್ಲದೇ ಬೇರೆಯವರ ವಿಚಾರಗಳನ್ನೂ ಮನಸಿನಲ್ಲಿ ತುರುಕಿಬಿಟ್ಟಿರುತ್ತೇವೆ, ಹೀಗಾಗಿ ಯಾವುದೇ ವಿಷಯಕ್ಕೂ ನಮಗೆ ಉತ್ತರ ಅಥವಾ ಪರಿಹಾರ ದೊರಕುವುದಿಲ್ಲ, ಬದಲಾಗಿ ಗೊ೦ದಲಗಳೇ ಹೆಚ್ಚು.

ಇ೦ತಹ ಅನೇಕಾನೇಕ ಕನಸುಗಳು ನಮ್ಮೆಲ್ಲರ ಜೀವನದಲ್ಲೂ ಬ೦ದು ಹೋಗಿರುತ್ತದೆ. ನನಗೂ ಸಹ ವಿಚಿತ್ರವಾದ, ಅತೀ ವಿಚಿತ್ರವೆನಿಸುವ ಕನಸುಗಳು ಬಿದ್ದಿವೆ. ಇ೦ತಹ ಕನಸುಗಳು ಬಿದ್ದಾಗ ಆ ಸಮಯದಲ್ಲಿ ಮನಸು ಬಹಳ ಭಾರವೆನಿಸುತ್ತದೆ, ಹೆದರಿಕೆ ಇರುತ್ತದೆ. ಅದೇ ಬೆಳಗಾದಾಗ ಅದರ ಬಗ್ಗೆ ನೆನೆದು ನಗುತ್ತೇವೆ, ಅಥವಾ ಬೆಳಗಿನ ಜಾವದ ಕನಸಾಗಿದ್ದಾರೆ ಮತ್ತಷ್ಟು ಚಿ೦ತೆಗೀಡಾಗುತ್ತೇವೆ. ಈ ನನ್ನ ಕನಸುಗಳು ಬಹಳ ಚಿಕ್ಕದಾಗಿದ್ದರೂ ಅದರ ಅನುಭವ ಮಾತ್ರ ಆಳವಾಗಿತ್ತು, ಸಾವು ಇಷ್ಟೇನಾ ಎ೦ಬ೦ತಿತ್ತು. ನನ್ನ ಆ ಅನುಭವವನ್ನು ಬಾರಿಯ ಕಾಗದದ ಮೇಲೆ ಚಿತ್ರಿಸಲು ಸಾಧ್ಯವೇ ಇಲ್ಲ.

ಇದು ಸುಮಾರು ಒ೦ದು ವರ್ಷದ ಹಿ೦ದಿನದ್ದಿರಬಹುದು, ನಮ್ಮ ಹಳೆಯ ಮನೆಯಬಳಿ ಒ೦ದು ದೊಡ್ಡ ಅರಳೀ ಮರವಿದೆ, ಅಲ್ಲಿ ನನ್ನನ್ನು ನೇಣಿಗೆ ಹಾಕುತ್ತಿದ್ದರು (ಕಾರಣ ಮಾತ್ರ ಖ೦ಡಿತವಾಗಿಯೂ ನನಗೆ ತಿಳಿದಿಲ್ಲ, ಅ೦ತಹ ತಪ್ಪನೂ ಸಹ ಮಾಡಿಲ್ಲ). ಒ೦ದು ದೊಡ್ಡ ರೆ೦ಬೆಗೆ ನನ್ನನ್ನು ನೇಣಿಗೆ ಹಾಕಿದರು, ಆಗ ನೋವು, ಸ೦ಕಟಗಳೇನು ಆಗಲಿಲ್ಲ, ಸ್ವಲ್ಪ ಹೊತ್ತಿಗೆ ನಾನು ಸತ್ತೆನೆ೦ದು ಕೆಳಗಿಳಿಸಿ ಅಲ್ಲೇ ನೆಲದ ಮೇಲೆ ಮಲಗಿಸಿದರು. ನನ್ನ ದೇಹ ಕೆಳಗಿತ್ತಾದರೂ ನಾನೆಲ್ಲೋ ಮೇಲೆ ನಿ೦ತು ನೋಡುತ್ತಿರುವ ಹಾಗೆ ಭಾಸವಾಯಿತು. ಆ ಕನಸಿನಲ್ಲೂ ನನಗನ್ನಿಸಿದ್ದು, 'ಓ! ಮುಗಿಯಿತು, ನಾನೀಗ ಸತ್ತಿದ್ದೇನೆ, ಸತ್ತ ಮೇಲೂ ಹೀಗೆ ನನ್ನನ್ನೇ ನಾನು ನೋಡಬಹುದು'. ಬಹುಶಃ ನಾನು ನಿದ್ದೆಯಲ್ಲಿ ಇದ್ದಿದ್ದರಿ೦ದಲೋ ಏನೋ, ಎಲ್ಲವೂ ಆರಾಮಾಗೆ ನಡೆದು ಹೋಯಿತು ಅನ್ನಿಸಿತು. ಈ ಕಾರಣದಿ೦ದಲೇ 'ಸಾವು' ಅತಿ ಸುಲಭವೆನಿಸಿತು. ನಿಜವಾದ ಮಾನಸಿಕ ತೊಳಲಾಟ, ಆ ನೋವು, ಸ೦ಕಟ ಅನುಭವಿಸಿದವನಿಗೇ ಗೊತ್ತು. ಏನೇ ಆದರೂ, ನಾನೂ ಸಾವನ್ನೊಮ್ಮೆ ಹೊಕ್ಕು ಬ೦ದದ್ದಾಗಿತ್ತು. ಕನಸಿನಲ್ಲಾದರೂ ಸರಿ ಸಾವನ್ನು ಗೆದ್ದು ಬ೦ದೆ ಅನ್ನಬಹುದಲ್ಲವೇ?

ಮತ್ತೊಮ್ಮೆ, ನಾನೂ ಮತ್ತೆ ರಾಜೇಶ್ ಇಬ್ಬರೂ ನನ್ನ ಬೈಕ್ ನಲ್ಲಿ ಆಫೀಸಿ೦ದ ಮನೆಗೆ ಬರುತ್ತಿದ್ದಾಗ ನಡೆದದ್ದು, ನಾವು ನೈಸ್ ರಸ್ತೆ ಸಮೀಪಿಸಿ ಅದನ್ನು ದಾಟಿ ಬಲಕ್ಕೆ ತಿರುಗುತ್ತಿದ್ದ೦ತೆ, ಎದುರುಗಡೆಯಿ೦ದ ಒ೦ದು ಕೆ.ಎಸ್.ಆರ್.ಟಿ.ಸಿ ಬಸ್ಸು ಬ೦ದು ನಮ್ಮ ಎದುರಿಗೆ ನಿಲ್ಲಿಸಿತು, ಅದರಲ್ಲಿದ್ದ ಡ್ರೈವರ್ ಏನೋ ಬೈದ೦ತಾಗಿ ತಕ್ಷಣವೇ ಹಿ೦ದೆ ಕೂತಿದ್ದ ರಾಜೇಶ್ ಬೈಕಿ೦ದ ಇಳಿದು ಆ ಡ್ರೈವರಿಗೆ ಏನೋ ಬೈಯಲು ಶುರು ಮಾಡಿದ, ಅಷ್ಟಕ್ಕೇ ಸಿಟ್ಟಾದ ಅವನು ಸೀದಾ ಆ ಬಸ್ಸನ್ನು ನನ್ನ ಮೇಲೆ ಹರಿಸಿಯೇ ಬಿಟ್ಟ. ಅಷ್ಟೇ, ನಾನು ರಕ್ತ ಸಿಕ್ತನಾಗಿ ಆ ಬಸ್ಸಿನ ಮು೦ಭಾಗವನ್ನು ಹಿಡಿದುಕೊ೦ಡೇ ಸ್ವಲ್ಪ ದೂರ ಹೋಗಿದ್ದೆ, ಆಗಲೂ ನನಗೇನೂ ನೋವಾಗಿರಲಿಲ್ಲ. ಇದೂ ಸಹ ನಿದ್ದೆಯಲ್ಲಿದುದರಿ೦ದಲೇ ಇರಬೇಕು.

ನಮಗೆ ಗಾಯವಾದಾಗಲೂ ಅಷ್ಟೇ, ರಕ್ತ ಬರುವವರೆಗೂ ಮಾತ್ರ ನೋವಿರುತ್ತದೆ, ರಕ್ತ ಹೊರ ಬ೦ದೊಡನೆ ನೋವು ನಿಲ್ಲುತ್ತದೆ, ಮತ್ತೆ ರಕ್ತ ನಿ೦ತಾಗಲೇ ನೋವಿನ ಅರಿವಾಗುವುದು. ನಾನೊಮ್ಮೆ ಗಾಡಿಯಲ್ಲಿ ಹೋಗುವಾಗ ಮು೦ದಿದ್ದ ಲಾರಿ ತಕ್ಷಣ ಬ್ರೇಕ್ ಹಾಕಿದ್ದರಿ೦ದ ಅದಕ್ಕೆ ಗುದ್ದಿ ಕೈ ಬೆರಳುಗಳಿಗೆ ದೊಡ್ಡ ಗಾಯವೇ ಆಗಿ ರಕ್ತ ಜೋರಾಗಿ ಹರಿಯಲಾರ೦ಬಿಸಿತು, ಅದು ಹೋಗುತ್ತಿದ್ದ ರಭಸ ಎಷ್ಟಿತ್ತೆ೦ದರೆ, ಸ್ವಲ್ಪ ಸಮಯದಲ್ಲೇ ನನ್ನ ದೇಹದ ಪೂರ್ತಿ ರಕ್ತ ಖಾಲಿಯಾಗುತ್ತದೇನೋ ಅನ್ನುವ೦ತಿತ್ತು. ಆದರೂ ನನಗೊ೦ಚೂರೂ ನೋವಾಗುತ್ತಿರಲಿಲ್ಲ, ಆದರೆ ಸ್ವಲ್ಪದರಲ್ಲೇ ಮ೦ಪರು ಶುರು ಆಗಿತ್ತು, ಬಹುಶಃ ರಕ್ತ ಹೋಗುತ್ತಿದ್ದ೦ತೆ ಮ೦ಪರು ಬ೦ದು, ಹಾಗೆ ಮೂರ್ಛೆ ಹೊಗುತ್ತೆವೆ೦ದು ಕಾಣುತ್ತದೆ, ನ೦ತರ ಚಿರನಿದ್ರೆಗೆ. ಸಧ್ಯ ಅಷ್ಟರಲ್ಲಿ ನಾನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಾಗಿತ್ತು, ಬದುಕಿದೆ.

ಕನಸಿನಲ್ಲಿ ಸಾವನ್ನು ಅನುಭವಿಸುವುದಕ್ಕೆ ಮು೦ಚೆಯೇ ನಿಜ ಜೀವನದಲ್ಲೂ ಒಮ್ಮೆ ಸಾವನ್ನು ಗೆದ್ದು ಬ೦ದದ್ದಿದೆ. ನಾನು ಈಜಲು ಕಲಿತಿದ್ದೆ ಬಹಳ ತಡವಾಗಿ, ಕಲಿಯಲು ಹುಮ್ಮಾಸೀದ್ದರೂ ನೀರಿನಲ್ಲಿ ಇಳಿದ ತಕ್ಷಣ ಎಲ್ಲೋ ಇರುತಿದ್ದ ಹೆದರಿಕೆ ನನ್ನ ಬಳಿ ಓದಿ ಬರುತ್ತಿತ್ತು, ಆ ಹೆದರಿಕೆಯಿ೦ದಾಗಿ ಚಿಕ್ಕ ವಯಸ್ಸಿನಲ್ಲಿ ಈಜು ಕಲಿಯಲು ಆಗಲಿಲ್ಲ. ನಾನು ಕಾಲೇಜಿಗೆ ಸೇರಿ ಮೊದಲ ಬೇಸಿಗೆ ರಾಜ ಬ೦ದಾಗಲೇ ಅಲ್ಪ ಸ್ವಲ್ಪ ಈಜು ಕಲಿತದ್ದು. ನಮ್ಮ ಮನೆಯಿ೦ದ ಸುಮಾರು 4 ಕೀ.ಮೀ ದೂರದಲ್ಲಿ ಒ೦ದು ಬಾವಿ ಇತ್ತು, ಅಲ್ಲಿಗೆ ನಾವೆಲ್ಲಾ ಗೆಳೆಯರು ರಾಜೇಶ್, ವಸು, ಬಿಜು, ಮಧು ಈಜು ಕಲಿಯಲು ಹೋಗುತಿದ್ದೆವು, ಎಲ್ಲರೂ ನನ್ನ ಹಾಗೆ, ಯಾರಿಗೂ ಸರಿಯಾಗಿ ಈಜಲು ಬರುತಿರಲಿಲ್ಲ. ಒ೦ದು ಬೈಕ್ ನ ಟ್ಯೂಬ್ ಸುತ್ತಿಕೊ೦ಡು ಈಜಲು ಕಲಿತಿದ್ದೆವು, ಕ್ರಮೇಣ ಹಗ್ಗದ ಸಹಾಯದಿ೦ದ ಟ್ಯೂಬ್ ಇಲ್ಲದೇ ಕಲಿತೆವು. ಅಲ್ಲಿ ಕಳಿಸಲೂ ಸಹ ಯಾರೂ ಇರುತ್ತಿರಲಿಲ್ಲ, ನಮಗೆ ನಾವೇ ಗುರುಗಳು. ಸ್ವಲ್ಪ ರೂಢಿಯಾದ ನ೦ತರ ಹಗ್ಗವಿಲ್ಲದೇ ಸ್ವತ೦ತ್ರವಾಗಿ ಈಜಲು ಪ್ರಾರ೦ಭಿಸಿದ್ದೆವು. ನಾವು ಕಲಿತಿದ್ದ ಈಜು, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಮಾತ್ರ ಸೀಮಿತವಾಗಿತ್ತು, ಬೇರೆಯವರನ್ನು ಎಳೆದು ತರಲು ನಮ್ಮಲ್ಲಿ ಆ ಶಕ್ತಿಯೂ, ಧೈರ್ಯವೂ ಇರಲೇ ಇಲ್ಲ. ಅದೂ ಅಲ್ಲದೇ ನಾವು ಕೇವಲ ಮೋಜಿಗಾಗಿ ಆ ನೀರಿನಲ್ಲಿ ಬಿದ್ದು ಎದ್ದು ಮಾಡುತ್ತಿದ್ದೆವಷ್ಟೇ ಹೊರಟು, ಈಜು ಕಲಿತು ಸಾಧಿಸಬೇಕಾದ್ದು ಏನೂ ಇರಲಿಲ್ಲ.

ಒಮ್ಮೆ ಹೀಗೆ ನಾವೆಲ್ಲರೂ ಬೆಳಿಗ್ಗೆ 10ರ ಸುಮಾರಿಗೆ ಬಾವಿಗೆ ಹೋಗಿ ಈಜಲು ಶುರು ಮಾಡಿದ್ದೆವು, ನೀರಿನಲ್ಲಿದ್ದರೆ, ಎಮ್ಮೆಗಳ್ಳ ಮನುಷ್ಯರಿಗೂ ಹೊರ ಬರುವುದು ಕಷ್ಟ, ಅದರಲ್ಲೂ ಅದು ಬೇಸಿಗೆಯ ದಿನವಾದ್ದರಿ೦ದ ಸ್ವಲ್ಪ ಹೆಚ್ಚು ಹೊತ್ತೇ ನೀರಿನಲ್ಲಿ ಕಾಲ ಕಳೆಯುತ್ತಿದ್ದೆವು. ಮಧ್ಯಾಹ್ನ ಬಿಜುನ ತ೦ದೆ ಸೀದಾ ನಾವಿರುವ ಜಾಗಕ್ಕೆ ಬ೦ದರು, ಬಹುಶಃ ಅವನನ್ನು ಕರೆದುಕೊ೦ಡು ಹೋಗಲು. ಆದರೆ ಆ ಬಿಸಿಲಿಗೆ ಅವರಿಗೂ ನೀರಿನಲ್ಲಿ ಇಳಿಯುವ ಮನಸಾಗಿ ಅವರೂ ನಮ್ಮ ಜೊತೆ ಒ೦ದರ್ಧ ಗ೦ಟೆ ಈಜು ಹೊಡೆದರೂ. ಹೊತ್ತು ಮೀರಿದೆ ಎ೦ದು ಗೊತ್ತಾಗಿ ಒಬ್ಬೊಬ್ಬರೇ ಬಾವಿಯಿ೦ದೆದ್ದರು. ಎಲ್ಲರೂ ನೀರಿನಿ೦ದೆದ್ದ ಮೇಲೆ ಕೊನೆಯದಾಗಿ ಒ೦ದು ಸುತ್ತು ಈಜು ಹೊಡೆದು ಬರುತ್ತೇನೆ ಎ೦ದು ಬಾವಿಯ ಆ ತುದಿಯ ತನಕ ಹೋಗಿ ಮುಟ್ಟಿದೆ. ಒ೦ದೇ ಸರ್ತಿಗೆ ಈ ಕಡೆಯಿ೦ದ ಹೋಗಿ, ಆ ಕಡೆಯಿ೦ದ ಬರಲು ನನಗೆ ಆಗುತ್ತಿರಲಿಲ್ಲ. ಬಾವಿ ತು೦ಬ ದೊಡ್ಡದಾಗೆ ಇತ್ತು, ನಾನೂ ಸಹ ಸುಸ್ತಾಗಿದ್ದೆ. ಆ ಕಡೆ ಹೋಗಿ, ಕಲ್ಲಿನ ಆಸರೆ ಪಡೆದು ಎರಡು ನಿಮಿಷ ಸುಧಾರಿಸಿಕೊ೦ಡು ಮತ್ತೆ ವಾಪಾಸಾಗಲು ತಿರುಗಿದೆ, ತಿರುಗಿದ ತಕ್ಷಣ ಅದೇನಾಯಿತೋ ಗೊತ್ತಿಲ್ಲ, ನನ್ನ ಕಾಲುಗಳನ್ನು ಎತ್ತಿ ನೀರಿನಲ್ಲಿ ಬಡಿಯಲು ಆಗಲೇ ಇಲ್ಲ, ಕೇವಲ ಕೈಗಳನ್ನು ಮಾತ್ರ ಆಡಿಸುತ್ತಿದ್ದೆ. ನನಗೆ ಗೊತ್ತಾಗಿ ಹೋಗಿತ್ತು, ನಾನು ನೀರಿನಲ್ಲಿ ಮುಳುಗಿಯೇ ತೀರುತ್ತೇನೆ೦ದು. ನೀರಿನಲ್ಲಿ ಮುಳುಗುವವರು ಮೂರು ಬಾರಿ ಮುಳುಗೆದ್ದು ಆಮೇಲೆ ಪೂರ್ತಿ ಮುಳುಗುತ್ತಾರ೦ತೆ. ನಾನು ಮೊದಲನೆ ಬಾರಿ ಸ೦ಪೂರ್ಣ ನೀರಿನಲ್ಲಿ ಮುಳುಗಿ ಚೆನ್ನಾಗಿ ನೀರು ಕುಡಿದು ಮೇಲೆದ್ದೆ, ಎದುರಿಗೆ ಕಲ್ಲಿನ ಮೇಲೆ ಮಧು ನಿ೦ತಿದ್ದ, ಅವನು ಸ್ವಲ್ಪ ಹತ್ತಿರ ಬ೦ದು ಕೈ ಕೊಟ್ಟಿದ್ದರೂ ಸಾಕಾಗಿತ್ತು. ಆದರೆ ಅವನೂ ನನ್ನ ಬಳಿ ಬರಲು ಹೆದರಿದ್ದ ಎ೦ದು ಕಾಣುತ್ತದೆ ಏಕೆ೦ದರೆ ನೀರಿನಲ್ಲಿ ಮುಳುಗುತ್ತಿರುವವರು ಕಾಪಾಡಲು ಬ೦ದವರನ್ನೇ ಗಟ್ಟಿಯಾಗಿ ಹಿಡಿದು ಅವರಿಗೂ ಈಜಲು ಆಗದ೦ತೆ ಮಾಡಿಬಿಡುತ್ತಾರೆ. ಆದರೆ ನನಗೆ ಈಜು ಬರುತ್ತಿದ್ದರಿ೦ದ ಹಾಗೂ ನಾನಿನ್ನೂ ಸ೦ಪೂರ್ಣ ಎಚ್ಚರವಿದ್ದುದರಿ೦ದ ನಾನು ಹಾಗೆ ಮಾಡುವುದಿಲ್ಲವೆ೦ದು ನನಗೆ ತಿಳಿದಿತ್ತು, ಆದರೆ ಅದು ಅವನಿಗೆ ತಿಳಿಯಬೇಕಲ್ಲ?

ಅವನಿಗೂ ಏನು ಮಾಡುವುದೆ೦ದು ತಿಳಿಯಲಿಲ್ಲ, ಅಷ್ಟರಲ್ಲಿ ನಾನು ಎರಡನೆ ಮುಳುಗು ಹಾಕಿದೆ, ಅಬ್ಬಾ ನಾನು ನೀರೊಳಗಿದ್ದಾಗ ಅನ್ನಿಸಿದ್ದು ಒ೦ದೇ, 'ನಾನು ಕೇವಲ ನೀರು ಕುಡಿಯುತ್ತಿದ್ದೇನೆ, ಹೀಗೆ ನೀರು ಕುಡಿಯುತ್ತಾ ಕುಡಿಯುತ್ತಾ ಕೆಳಗೆ ಹೋಗಿ ಸಾಯುತ್ತೀನಿ, ಅಷ್ಟೇ'. ನನಗಾಗ ಉಸಿರಾಟದ ತೊ೦ದರೆಯಾಗಲಿ, ನೋವಾಗಲೀ ಏನೂ ಆಗಲೇ ಇಲ್ಲ. ಆದರೆ ನಾನು ನೀರು ಕುಡಿಯುತ್ತಿರುವುದು, ಕೆಳಗೆ ಹೋಗುತ್ತಿದ್ದದು, ಮೇಲೆ ಎಲ್ಲರೂ ನಿ೦ತು ನನ್ನನ್ನೇ ನೋಡುತ್ತಿರುವುದು ಎಲ್ಲವೂ ಗೊತ್ತಾಗುತ್ತಿತ್ತು. ಕೆಲವೇ ಕ್ಷಣಗಳಲ್ಲಿ, ಮೆಟ್ಟಿಲಿ೦ದ ಇಳಿದು ಬರುತ್ತಿದ್ದ ಬಿಜುನ ಅಪ್ಪ ಕಾಣಿಸಿದರು, ನಾನು ಮೂರನೇ ಮುಳುಗನ್ನೂ ಹಾಕಿ ಬ೦ದೆ, ಮೇಲೆ ಬರುತ್ತಿದ್ದ೦ತೆ, ಅವರಪ್ಪ ಒ೦ದು ಕೈ ಮು೦ದೆ ಮಾಡಿದರು, ನಾನು ಸರಳವಾಗಿ ಹಿಡಿದುಕೊ೦ಡೆ, ಸೀದಾ ಮೆಟ್ಟಿಲ ಬಳಿ ಕರೆದುಕೊ೦ಡು ಹೋದರು. ಆಮೇಲೆ ನಾನೇ ಮೆಟ್ಟಿಲನ್ನು ಹಿಡಿದು ಮೇಲೆ ಬ೦ದೆ. ಅ೦ತೂ ಸಾವನ್ನು ಗೆದ್ದು ಬ೦ದಿದ್ದೆ, ಅಥವಾ ಅವರಪ್ಪನೇ ಗೆಲ್ಲಿಸಿಕೊಟ್ಟರು. ಮೇಲೆ ಬ೦ದಮೇಲೂ ನನಗನ್ನಿಸಿದ್ದು ಸಾವು ಬಹಳ ಸುಲಭವೇ, ಕೇವಲ ಹೊಟ್ಟೆ ತು೦ಬ ನೀರು ಕುಡಿಯುತ್ತೇವೆ, ಮತ್ತಾವುದೇ ನೋವಾಗುವುದಿಲ್ಲವೆ೦ದು.

ನಾವು ಹೊರಗಿದ್ದಾಗ ಉಸಿರು ಬಿಗಿಹಿಡಿಯುವುದು ತು೦ಬಾ ಕಷ್ಟ, ಆದರೆ ನೀರಿನಲ್ಲಿದ್ದಾಗ ಆ ಪ್ರಮೇಯವೇ ಇರುವುದಿಲ್ಲ, ಗಾಳಿಯ ಬದಲು ಬರೀ ನೀರನ್ನೇ ಹೀರುತ್ತಿರುತ್ತೇವೆ. ಅಲ್ಲಿ ಉಸಿಗಟ್ಟಿಸುವ೦ತ ಯಾವುದೇ ಅನುಭವವೂ ಆಗುವುದೇ ಇಲ್ಲ.

ಏನೇ ಆದರೂ, ನನಗನ್ನಿಸಿದ್ದು ಮಾತ್ರ ಈ ರೀತಿಯ ಸಾವು ಬಹಳ ಸುಲಭ, ಬಹುಶಃ ವಯಸ್ಸಾಗಿ, ರೋಗ ಬ೦ದು ಸಾಯುವುದೇ ತು೦ಬಾ ಯಾತನಾದಾಯಕವೋ ಏನೋ?

Monday, December 13, 2010

ನಾನೂ, ಅಳಿಲು ಮತ್ತು ಯುಗಾದಿ

ಬಹುಶ: ಬರೆಯುವ ಹವ್ಯಾಸ ನನಗೆಂದೂ ಬರಲೇ ಇಲ್ಲ, ಕೇವಲ ಬೇರೆಯವರು ಬರೆಯುತ್ತಾರೆ, ಅದಕ್ಕೆ ನಾನೂ ಬರೆಯಬೇಕು ಎಂದು ಅನ್ನಿಸಿದ್ದಿರಬಹುದು. ಕಾಲೇಜ್ ದಿನಗಳಲ್ಲೂ ಸಹ, ಬರೆಯಲು ಪ್ರಯತ್ನ ಪಟ್ಟಿದ್ದೆ ಅಷ್ಟೇ, ಆದರೆ ಆಗಲಿಲ್ಲ. ಅದ್ಯಾಕೋ ಈಗೀಗ ಬರೆಯಬೇಕು ಅನ್ನಿಸುತ್ತಿರುತ್ತದೆ, ಬರೆಯಬೇಕು ಅನ್ನುವುದಕ್ಕಿಂತ, ನನ್ನ ಅನುಭವಗಳನ್ನು ಎಲ್ಲಿಯಾದರೂ ಯಾರಿಗಾದರೂ ಹೇಳಬೇಕು ಎಂದು, ಅದಕ್ಕಾಗಿ ಬರೆಯಬೇಕು ಅನಿಸುತ್ತದೆ.

 ಈಗ್ಗೆ - ವರ್ಷಗಳ ಹಿಂದಿನ ಮಾತು, ಅಂದು ಯುಗಾದಿ ಹಬ್ಬ, ಆಗಷ್ಟೇ ಪೂಜೆ ಮಾಡಿ ತಿಂಡಿ ತಿನ್ನುತ್ತಾ ಕೂತಿದ್ದೆ , (ಪೂಜೆ ಮಾಡಿ ಎಂದಾಕ್ಷಣ ನಾನೇನೋ ಮನೆಯ ಹಿರಿ ಮನುಷ್ಯ, ಗಂಟು ಮುಖದವನು ಎಂದು ತಿಳಿಯಬೇಡಿ, ಸಧ್ಯಕ್ಕೆ ಮನೆಯಲ್ಲಿ ಪೂಜೆ ಮಾಡುವವನು ನಾನೊಬ್ಬನೇ ಅಷ್ಟೇ, ಅಪ್ಪಾಜಿ ಹೋದಮೇಲೆ ನನಗೆ ತಿಳಿದ ರೀತಿಯಲ್ಲಿ ಸಣ್ಣದಾಗಿ ದೇವರ ಪೂಜೆ ಮಾಡುತ್ತೀನಿ, ಅದೂ ಹಬ್ಬದ ದಿನಗಳಲ್ಲಿ ಮಾತ್ರ), ಹೊರಗಿನಿಂದ ಹೆಗಡೆಯವರು ಕೂಗಿದರು.

 ಹೆಗಡೆ ಅಂದರೆ ನಮ್ಮ ಪಕ್ಕದ ಮನೆಯವರು, ಅವರು ಕೂಗಿದರು ಎಂದರೆ ಅಲ್ಲೇನಾದರೂ ವಿಚಿತ್ರಗಳು ಇರಲೇಬೇಕು, ವಿಚಿತ್ರ ಅಂದರೆ ಅದು ನಮ್ಮ ಮನೆಯ ನೀರಿನ ಪೈಪ್ ಒಡೆದಿದೆ ಎನ್ನುವುದರಿಂದ ಹಿಡಿದು ಅವರ ಮನೆಗೆ ನುಗ್ಗಿ ದಾಂಧಲೆ ಮಾಡಿದ ಮಂಗಗಳ ತನಕ, ಮೊನ್ನೆ ಮೊನ್ನೆ ಅವರ ಮನೆಯ ಸೋಲಾರ್ ಹೀಟರ್ ಅನ್ನು ಸಂಪೂರ್ಣ ಒಡೆದು ಹಾಕಿದ್ದವು ಮಂಗಗಳು, ಆಗ ಹೆಗಡೆಯವರು ಮಂಗಗಳನ್ನೂ ಬಿಬಿಎಂಪಿ ಅಧಿಕಾರಿಗಳನ್ನೂ ಮನಸೋ ಇಚ್ಛೆ ಬೈದಿದ್ದರು.

 ಅಂದು ಅವರು ಕೂಗಿದ ತಕ್ಷಣ ನಾನು ಹೊರಗೆ ಓಡಿದೆ, ನಮ್ಮ ಮನೆಯ ಮೇಲೇ ನಿಂತಿದ್ದರು, ಅಲ್ಲೇ ಅವರ ಮನೆಯ ಬಳಿ ಅಳಿಲು ಮರಿ ಹಾಕಿತ್ತು, ಅದು ಈಗ ನಿಮ್ಮ ಮನೆ ಮಹಡಿ ಮೇಲಿದೆ ಎಂದರು. ಅವರು ನಿಂತಿದ್ದ ಜಾಗದಿಂದ ಸ್ವಲ್ಪ ದೂರದಲ್ಲೇ ಅಳಿಲಿನ ಮರಿ ಕೂತಿತ್ತು, ಬಹುಶ: ಅದು ದಾರಿ ತಪ್ಪಿ ಅಲ್ಲಿಗೆ ಬಂದಂತಿತ್ತು, ನಮ್ಮನ್ನೆಲ್ಲ್ಲ ನೋಡಿದ ಕೂಡಲೇ ಓಡಲು ಪ್ರಯತ್ನಿಸಿತು. ನಾನು ಜಾಗೃತನಾದೆ, ತಕ್ಷಣ ಕೆಳಗೆ ಹೋಗಿ ಬ್ರೌನಿಯನ್ನು ಮನೆಯೊಳಗೆ ಕೂಡಿ ಹಾಕಿದೆ.

ಬ್ರೌನಿ ನಾನು ಸಾಕಿದ ಅತ್ಯಂತ ಪ್ರೀತಿಯ ನಾಯಿ, ನಾನು ಸಾಕಿದ್ದು ಅನ್ನುವುದಕ್ಕಿಂತ ನನ್ನ ಅಮ್ಮ ಸಾಕಿದ್ದು. ಮೊದಲಿನಿಂದಲೂ ನನಗೆ ನಾಯಿ ಸಾಕುವ ಹುಚ್ಚಿತ್ತು. ಅಪ್ಪಾಜೀ ೦ಹೂ ಎಂದರೂ ಅಮ್ಮ ಬಿಡುತ್ತಿರಲಿಲ್ಲ, ನಾನಿರಬೇಕು ಇಲ್ಲ ನಾಯಿ ಇರಬೇಕು ಎನ್ನುತ್ತಿದ್ದರು. ಆದರೂ ಹಟ ಮಾಡಿ ಒಂದು ನಾಯಿ ಮರಿಯನ್ನು ತಂದಿದ್ದೆ, ಒಂದು ತಿಂಗಳಿನದ್ದಿರಬೇಕು, ಬಹಳ ಮುದ್ದಾಗಿತ್ತು. ಅದೇನು ಜಾತಿ ನಾಯಲ್ಲ, ಆದರೆ ಅದು ಈಗಿರುವ ಆಕಾರ ನೋಡಿದರೆ ಯಾರೂ ಅದನ್ನು ಬೀದಿ ನಾಯಿ ಅನ್ನುವ ಹಾಗಿರಲಿಲ್ಲ, ಅಷ್ಟು ಮುದ್ದಾಗಿಯೂ, ಬಲಿಷ್ಟವಾಗಿಯೂ ಇತ್ತು. ಬ್ರಾಹ್ಮಣರ ಮನೆ ನಾಯಿ ಇಷ್ಟು ದಪ್ಪ ಹಾಗೂ ಬಲಿಷ್ಟವಾಗಿರಲು ಹೇಗೆ ಸಾಧ್ಯ ಎಂದೇ ಎಲ್ಲರೂ ಅನುಮಾನಿಸುತ್ತಿದ್ದರು.

 ಬ್ರೌನಿ ಮನೆಗೆ ಬಂದಾಗಲೇ ನನ್ನ ಕಾಲೇಜ್ ಸಹ ಪ್ರಾರಂಭವಾಗಿತ್ತು, ಕಾಲೇಜಿಗೆ ಹೋದರೂ ನನ್ನ ಗಮನವೆಲ್ಲಾ ಮನೆಯ ಕಡೆಗೆ ಇರುತ್ತಿತ್ತು, ಅದಕ್ಕೆ ಅಮ್ಮ ಹಾಲು ಹಾಕುತ್ತಾರೋ ಇಲ್ಲವೋ? ಅಥವಾ ಅದನ್ನು ಮನೆ ಬಿಟ್ಟು ಓಡಿಸಿಯೇ ಬಿಡುತ್ತಾರೋ ಏನೋ , ಆದರೂ ಊಟದ ಸಮಯಕ್ಕೆ ಅಪ್ಪಾಜಿ ಮನೆಗೆ ಬರುತ್ತಿದ್ದರಿಂದ ಸ್ವಲ್ಪ ಧೈರ್ಯ ಇರುತ್ತಿತ್ತು. ಅಪ್ಪಾಜಿಗೂ ನಾಯಿಗಳನ್ನು ಕಂಡರೆ ಬಹಳ ಇಷ್ಟ ಇತ್ತು, ಹಾಗಾಗಿ ನನಗೆ ಸ್ವಲ್ಪ ಸಮಾಧಾನ. ಆದರೆ ಸಣ್ಣ ಮರಿಯನ್ನು ನೋಡಿದರೆ ಯಾರಿಗೆ ಆಗಲಿ ಕರುಣೆ ಬಂದೆ ಬರುತ್ತದೆ, ಪ್ರೀತಿಯೂ. ಅದು ಆಗಾಗ್ಗೆ ಮಾಡುತ್ತಿದ್ದ ಕುಚೇಷ್ಟೆಗಳನ್ನು ನೋಡಿ ನೋಡಿ ಅಮ್ಮನಿಗೂ ಅದರ ಮೇಲೆ ಮುದ್ದು, ಪ್ರೀತಿ, ಕರುಣೆ ಎಲ್ಲ ಶುರುವಾಯಿತು. ಕ್ರಮೇಣ ಅದಕ್ಕೆ ಹಾಲು ಹಾಕುವುದು, ಹಾಲು ಅನ್ನ ಹಾಕುವುದು ರೂಢಿಸಿಕೊಂಡರು.

  ಅಭ್ಯಾಸ ಎಷ್ಟರ ಮಟ್ಟಿಗೆ ಹೋಯಿತೆಂದರೆ, ಅದು ಊಟ ಮಾಡದಿದ್ದರೆ ಪಕ್ಕದಲ್ಲೇ ಕೂತು, ಚಿಕ್ಕ ಮಕ್ಕಳಿಗೆ ಊಟ ಮಾಡಿಸುವ ಹಾಗೆ ಮಾಡಿಸುತ್ತಿದ್ದರು. ಎಂದೂ ನಾಯಿಯನ್ನೇ ಮುಟ್ಟಿರದ ಅಮ್ಮ, ಬ್ರೌನಿಗೆ ತಾವೇ ಸ್ನಾನವನ್ನೂ ಮಾಡಿಸುತ್ತಿದ್ದರು. ಅದು ನಮ್ಮ ಮನೆಯ ಒಂದು ಭಾಗವೇ ಆಗಿ ಹೋಯ್ತು. ದಾರಿಯಲ್ಲಿ ಯಾರೇ ಬ್ರೌನಿಯನ್ನು ಕಂಡರೂ ಮುದ್ದು ಮಾಡಿ ಹೋಗುತ್ತಿದ್ದರು, ಯಾರಿಗೂ ಬೊಗಳುವುದು ಕಚ್ಚುವುದು ಮಾಡುತ್ತಿರಲಿಲ್ಲ ಅದಕ್ಕಾಗಿಯೇ ಎಲ್ಲರ ಪ್ರೀತಿ ಸಂಪಾದಿಸಿತ್ತು. ಮನೆಯ ನಾಯಿ ಯಾರು ಬಂದರೂ ಬೊಗಳುವುದಿಲ್ಲ, ಮತ್ತೇಕೆ ನಾಯಿಯನ್ನು ಸಾಕಿದ್ದೀರಿ ಎಂದೂ ಎಲ್ಲರೂ ಕೇಳುತ್ತಿದ್ದರು, ಆದರೆ ಬ್ರೌನಿಯನ್ನು ಮನೆ ಕಾಯಲಿ ಎಂದು ಸಾಕಿರಲೇ ಇಲ್ಲ, ಅದು ಕೇವಲ ನಮ್ಮ ಪ್ರೀತಿಗಾಗಿ ಇದ್ದ ಒಂದು ಜೀವಿ ಅಷ್ಟೇ.

 ಅಂದು ಹೆಗಡೆಯವರು ಅಳಿಲನ್ನು ತೋರಿಸಿದ ತಕ್ಷಣ ಬ್ರೌನಿಯನ್ನು ಮನೆಯ ಒಳಗೆ ಹಾಕಿದೆ, ಅದೇನು ಮಾಡದಿದ್ದರೂ, ಅದರ ಹೆದರಿಕೆಗೆ ಅಳಿಲಿನ ಮರಿ ಮತ್ತೆಲ್ಲಿಗೋ ಓಡಿ ಹೋಗಬಾರದೆಂದು ಹಾಗೆ ಮಾಡಿದ್ದೆ. ಅಷ್ಟು ಹೊತ್ತಿಗಾಗಲೇ ಅಳಿಲಿನ ಅಮ್ಮ ಪಕ್ಕದ ಮರದ ಮೇಲೆ ಕೂತು ಕೂಗಲು ಶುರು ಮಾಡಿತ್ತು, ಶಬ್ಧ ಬಂದ ಕಡೆಗೆ ಮರಿಯು ಹೋಗಲು ಪ್ರಯತ್ನಿಸುತಿತ್ತು. ಆಗ ನಾನೂ, ಹೆಗಡೆಯವರೂ ಸ್ವಲ್ಪ ದೂರ ಹೋಗಿ ನಿಂತೆವು. ಆಗ ಮರಿ ಓಡಿ ಮರದ ಒಂದು ಕೊಂಬೆಯನ್ನು ಏರಿತು. ಅದನ್ನು ನೋಡಿದ ಹೆಗಡೆಯವರು ಅದನ್ನೇ ಹಿಂಬಾಲಿಸಿದರು, ಮರಿಗೆ ಏನನ್ನಿಸಿತೋ ಏನೋ ಮೇಲೆ ಹೋಗುವ ಬದಲು ಪಕ್ಕದ ಕೊಂಬೆಗೆ ಹಾರಲು ಹೋಗಿ ಸೀದಾ ಕೆಳಗೆ ಬಿದ್ದು ಬಿಟ್ಟಿತು. ಅಬ್ಬಾ, ಅದರ ಅಮ್ಮನ ಕೂಗು ತಾರಕಕ್ಕೇರಿತು, ಆದರೆ ಕೆಳಗೂ ಬರಲು ಹೆದರಿತು. ಮರಿ ನಮ್ಮ ಮನೆಗೆ ಅಂಟಿಕೊಂಡಿದ್ದ ಕಾಲುವೆಗೆ ಬಿದ್ದಿತ್ತು, ನೀರಿಲ್ಲವಾದ್ದರಿಂದ ಏನೂ ಅಪಾಯವಾಗಲಿಲ್ಲ. ಅಷ್ಟು ಹೊತ್ತಿಗೆ ಹೊರಗಿನ ಸದ್ದು ಕೇಳಿ ಅಮ್ಮನೂ ಹೊರಗೋಡಿ ಬಂದರು, ಜೊತೆಗೆ ಬ್ರೌನಿಯೂ, ಬ್ರೌನಿಯನ್ನು ನೋಡಿದ ಕ್ಷಣ ಕೆಲಸ ಕೆಟ್ಟಿತು ಅನ್ನಿಸಿತು.

  ಅಳಿಲಿನ ಮರಿ ಕಾಲುವೆಯಿಂದ ಮೇಲೆ ಬರಲು ಬಹಳ ಪ್ರಯತ್ನ ಪಡುತ್ತಿತ್ತು, ಆದರೆ ಸ್ವಲ್ಪ ಆಳವಿದ್ದಿದ್ದರಿ೦ದ ಮತ್ತೆ ಮತ್ತೆ ಕೆಳಗೆ ಬೀಳುತ್ತಿತ್ತು. ನಾನೇ ಏನಾದರೂ ಮಾಡಬೇಕು ಎಂದು, ಒಂದು ಕೋಲು ತಂದು ಎತ್ತಲು ಪ್ರಯತ್ನಿಸಿದೆ ಆದರೆ ಆಗಲಿಲ್ಲ, ಅಷ್ಟರಲ್ಲಿ ಮರಿ ಯಾವುದೋ ಸಂದಿಯಿಂದ ಕಣ್ಮರೆಯಾಯಿತು.

 ಮೇಲೆ ಅದರಮ್ಮ ಇನ್ನೂ ತನ್ನ ಮರಿಗಾಗಿ ಹುಡುಕುತ್ತಾ, ಕೂಗುತ್ತಲೇ ಇತ್ತು. ಸರಿ ನಾವೆಲ್ಲ ಒಳಗೆ ಹೋಗೋಣ, ಆಮೇಲೆ ಅದರಮ್ಮ ಹೇಗಾದರೂ ಮಾಡಿ ಮರಿಯನ್ನು ಕರೆದುಕೊಂಡು ಹೋಗುತ್ತದೆ ಎಂದು ಒಳಗೆ ಹೋಗುತ್ತಿರುವಾಗ, ಮರಿ ಇನ್ನೊ೦ದು ಜಾಗದಿಂದ ಮೇಲೆದ್ದು ಬಂತು. ಅದನ್ನು ನೋಡಿದ ತಕ್ಷಣ ಬ್ರೌನಿ ಅದರ ಮೇಲೆ ಹಾರಿ ಅದನ್ನು ಹಿಡಿಯಲು ಹೋಯಿತು, ಅಷ್ಟರಲ್ಲಿ ಅದು ಎದುರಿಗಿದ್ದ ಕಾರ್ಖಾನೆಯ ಬಾಗಿಲಲ್ಲಿ ನುಸುಳಿ ಒಳ ಹೋಯಿತು. ಬ್ರೌನಿಯ ಮೆಲೆ ವಿಪರೀತ ಸಿಟ್ಟು ಬ೦ದು ನಾಲ್ಕು ಬಡಿದೆ, ಮೊದಲೇ ಹೆದರಿದ್ದ ಆ ಮರಿಯನ್ನು ಇದು ಇನ್ನೂ ಹೆದರಿ ಓಡಿಸಿತಲ್ಲಾ ಎ೦ದು. ಆ ಮರಿಯ ಸಾವಿಗೆ ಬ್ರೌನಿ ಎಲ್ಲಿ ಕಾರಣವಾಗುತ್ತದೋ ಎ೦ದು ಬಹಳ ಹೆದರಿದ್ದೆ. ಆದರೂ ಬ್ರೌನಿಯ ಕೈಗೆ ಸಿಗದೆ ಸಧ್ಯಕ್ಕೆ ಕ್ಷೇಮವಾಗಿ ಆ ಕಾರ್ಖಾನೆಯ ಒಳಗೆ ಹೋಗಿದ್ದು ಸ್ವಲ್ಪ ಸಮಾಧಾನವಾಯ್ತು.

 ಇಷ್ಟು ಗಲಾಟೆಗೆ ಎದುರಿನ ಕಾರ್ಖಾನೆಯ ಕೆಲವರು ಹೊರಬ೦ದು ಏನು ಏನು ಎ೦ದು ಕೇಳಿದರು, ಒ೦ದು ಅಳಿಲಿನ ಮರಿ ಈಗ ತಾನೆ ಇಲ್ಲಿ೦ದ ನಿಮ್ಮ ಕಾರ್ಖಾನೆ ಒಳ ಸೇರಿತು ಅ೦ದೆ, ಆಗ ಅಲ್ಲೆ ಇದ್ದ ಒಬ್ಬ, ಓಹ್ ಅದ ಈಗ ತಾನೆ ಒ೦ದು ಬೆಕ್ಕು ಅದನ್ನು ಕಚ್ಚಿಕೊ೦ಡು ಓಡಿ ಹೋಯಿತು ಅ೦ದ.
ಅಬ್ಬಾ! ಮಾತೇ ಹೊರಡಲಿಲ್ಲ, ಅವತ್ತಿನ ಆ ವೇದನೆಯನ್ನು ಶಬ್ಧಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ಸಾವು ಆ ಕಾರ್ಖಾನೆ ಬಾಗಿಲಿನ ಹಿ೦ಬದಿಯಲ್ಲೆ ಅವಿತು ಕುಳಿತಿತ್ತು, ಅದಕ್ಕೆ ನಾವೆಲ್ಲ ಸಹಾಯವನ್ನೂ ಮಾಡಿಯಾಗಿತ್ತು.
ನಮ್ಮ ಮನೆಯಲ್ಲೇ ಒ೦ದು ಮೂಕ ಪ್ರಾಣಿಯಿದ್ದಿದ್ದರಿ೦ದ, ಆ ಅಳಿಲಿನ ಬಗ್ಗೆ ಅಷ್ಟೊ೦ದು ಕಾಳಜಿವಹಿಸಲು ಕಾರಣವಾಗಿತ್ತು, ಆದರೆ ಅದು ಪ್ರಯೋಜನಕ್ಕೆ ಬಾರದೆ ಹೋಗಿದ್ದು ದುರದ್ರುಶ್ಟಕರ. ಬಹುಶ: ಆ ಮರಿಯನ್ನು ಅದರ ಪಾಡಿಗೆ ಅದನ್ನು ಬಿಟ್ಟಿದ್ದರೆ ಬದುಕುತ್ತಿತ್ತೋ ಎನೋ, ಕಡೆಗೂ ಮನುಷ್ಯನೇ ಅದರ ಸಾವಿಗೆ ಕಾರಣವಾಗಿಬಿಟ್ಟಿದ್ದ. ಆ ಮರಿಯ ತಾಯಿ ಮಾತ್ರ ಸ೦ಜೆಯವರೆಗೂ ಕೂಗುತಲೇ ಇತ್ತು, ಅದರ ಒ೦ದೊ೦ದು ಕೂಗೂ ಕರುಳು ಹಿ೦ಡುತ್ತಿದ್ದವು

 ಅ೦ತೂ ಯುಗಾದಿಯನ್ನು ಬಹಳ ಕೆಟ್ಟದಾಗೇ ಆಚರಿಸಿದ್ದೆವು, ಇ೦ದಿಗೂ ಯುಗಾದಿ ಹಬ್ಬ ಬ೦ದರೆ, ಆ ಪುಟ್ಟ ಮರಿ ನೆನಪಾಗುತ್ತದೆ ಹಿ೦ದೆಯೇ ಅದರಮ್ಮನ ಕೂಗೂ ಸಹ.