Wednesday, October 1, 2014

ನಾನೂ, ನನ್ನ ಉಳಿತಾಯ?ಮೊನ್ನೆ ಆಫೀಸಿನಿಂದ ಹೊರಟಾಗ ಪೆಟ್ರೋಲ್ ರಿಸರ್ವ್ಗೆ ಬಂದಿತ್ತು. ಬೆಳಿಗ್ಗೆ ಹೊರಟಾಗ ಹಾಕಿಸಿದರಾಯಿತು ಎಂದು ಹಾಗೆ ಮನೆಗೆ ಹೋದೆ. ಎರಡು ನಿಮಿಷ ಪೆಟ್ರೋಲ್ ಹಾಕಿಸುವುದು ದೊಡ್ಡದಲ್ಲ, ಆದರೆ ಅದಕ್ಕೆ ದುಡ್ಡು ಬೇಕು, ಈಗ ಡೆಬಿಟ್ ಕ್ರೆಡಿಟ್ ಕಾರ್ಡ್ ಇರುವುದರಿಂದ ಕೈಯ್ಯಲ್ಲಿ ದುಡ್ಡಿರುವುದಿಲ್ಲ. ಹಾಗಂತ ದಾರಿಯಲ್ಲೇ ಇರುವ ATMಗೆ ಹೋಗಿ ದುಡ್ಡು ತೆಗೆಯಲು ಸೋಮಾರಿತನ.

ಬೆಳಿಗ್ಗೆ ಆಫೀಸಿಗೆ ಹೊರಡುವಾಗ ಮತ್ತೆ ಪೆಟ್ರೋಲ್ನ ನೆನಪಾಯಿತು. ಹೇಗಿದ್ದರೂ ನಿನ್ನೆ ತಾನೇ ರಿಸರ್ವ್ ಗೆ ಬಂದಿದೆ, ಇವತ್ತೊಂದಿನ ಆರಾಮಾಗೆ ಹೋಗಿ ಬರಬಹುದು ಎಂದು ಪೆಟ್ರೋಲ್ ಹಾಕಿಸದೆ ಹೋಗಿ ಬಂದೆ. ಸಂಜೆ ಮನೆಗೆ ಬರುವಾಗ ನೆನಪಾಯಿತು, ಆದರೆ? ಸೋಮಾರಿತನ, ನಾಳೆ ಹಾಕಿಸಿದರಾಯಿತು, ಸರಿ ಸೀದಾ ಮನೆಗೆ ಹೋದೆ.
ಸರಿ, ಇವತ್ತು ಬೆಳಿಗ್ಗೆ ಮತ್ತೆ ನೆನಪಾಯಿತು. ಪೆಟ್ರೋಲ್ ಹಾಕಿಸಲೇ ಬೇಕಿತ್ತು, ಇಲ್ಲಾಂದರೆ ದಾರಿಯಲ್ಲಿ ಕೈ ಕೊಡುವುದು ಖಂಡಿತ. ಆದರೆ - ಕಿಲೋಮೀಟರ್ಗೆ ತೊಂದರೆ ಏನಿಲ್ಲ. ಮನೆಯಿಂದ ಸ್ವಲ್ಪ ದೂರದಲ್ಲೇ ಪೆಟ್ರೋಲ್ ಬಂಕ್ ಇದೆ. ಆದರೆ ಕಾರ್ಡ್ನಲ್ಲಿ ಹಾಕಿಸಿದರೆ ೧೫ ರೂಪಾಯಿ ಹೆಚ್ಚು ಹೋಗತ್ತೆ, ಅದೇ ಮುಂದಿನ ಪೆಟ್ರೋಲ್ ಬಂಕ್ನಲ್ಲಿ ಹೆಚ್ಚುವರಿ ಹಣ ಇಲ್ಲ. ಸರಿ ಮನೆ ಬಳಿ ಇರೋ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸದೇ ಮುಂದೆ ಹೋದೆ. ಕೇವಲ ೧೫ ರೂಪಾಯಿ ಉಳಿಸಲಷ್ಟೇ ಅಲ್ಲ, ಮುಂದಿನ ಪೆಟ್ರೋಲ್ ಬಂಕ್ನಲ್ಲಿ ಹಾಕಿಸಿದರೆ ನನ್ನ ಕಾರ್ಡ್ಗೆ ಕೆಲವು ರಿವಾರ್ಡ್ ಅಂಕಗಳೂ ಸಹ ದೊರೆಯುತ್ತದೆ. ಆಯ್ತಲ್ಲ, ಎಲ್ಲ ಕಡೆಯಿಂದಲೂ ಲಾಭ.

ಆದರೆ ಆದದ್ದೇ ಬೇರೆ, ಕೈಲಿರುವ ಒಂದು ಹಕ್ಕಿ ಬಿಟ್ಟು ಮರದ ಮೇಲಿನ ಎರೆಡೆರೆದು ಹಕ್ಕಿಗಳಿಗೆ ಆಸೆ ಪಟ್ಟಂತಾಯಿತು. ಸಿಕ್ಕ ಪೆಟ್ರೋಲ್ ಬಂಕ್ ಬಿಟ್ಟು ಸುಮಾರು ಕಿಮೀ ಹೋದ ಮೇಲೆ ಪೆಟ್ರೋಲ್ ಖಾಲಿಯಾಗಿಬಿಟ್ಟಿತ್ತು. ವಿಧಿಯಿಲ್ಲ, ಗಾಡಿಯನ್ನು ತಳ್ಳಬೇಕು, ಇಲ್ಲ ಅಲ್ಲೇ ಬಿಟ್ಟು ಎಲ್ಲಿಂದಾದರೂ ಪೆಟ್ರೋಲ್ ತಂದು ಸುರಿಯಬೇಕು. ಮಧ್ಯಾಹ್ನ ೧೨ ಗಂಟೆ, ಕೆಟ್ಟ ಬಿಸಿಲು, ಬೆನ್ನ ಮೇಲೆ ಹೆಣಭಾರದ ಎರಡು ಲ್ಯಾಪ್ಟಾಪ್ ಬ್ಯಾಗ್. ಮುಂದಿನ ಅಥವಾ ಹಿಂದಿನ ಪೆಟ್ರೋಲ್ ಬಂಕ್ಗೆ ಹೋಗಬೇಕೆಂದರೆ ೧ಕಿಮೀ ಹೋಗಬೇಕು, ಗಾಡಿಯನ್ನು ತಾಳ್ಳುವುದಂತೂ ಅಸಾಧ್ಯದ ಮಾತು, ತಳ್ಳಬಹುದೇನೋ, ಆದರೆ ಆಮೇಲೆ ಆಫೀಸಿಗೆ ಹೋಗುವುದು ಕಷ್ಟ, ಬೆವರು, ಒದ್ದೆ, ಛೇ ಆಗದ ಮಾತು. ಸರಿ ಅಲ್ಲೇ ಗಾಡಿ ಬಿಟ್ಟು ಪೆಟ್ರೋಲ್ ತರೋಣವೆಂದರೆ, ಅದು ದಾರಿ ಮಧ್ಯ, ಯಾವುದಾದರೂ ಅಂಗಡಿ ಮುಂಗಟ್ಟು ಇದ್ದರೆ ಚನ್ನ, ಅದು ಇನ್ನೂ ದೂರ ಇದೆ, ಅಲ್ಲೇ ATM ಸಹ ಇದೆ. ಸರಿ ನನ್ನ ಕೋಣನನ್ನು ದೂಡಲು ಶುರು ಮಾಡಿದೆ. ಸಾಮಾನ್ಯ ದಿನಗಳಲ್ಲಿ ಅದು ನನ್ನ ಐರಾವತ, ಅಂಬಾರಿ, ಬಿಳಿ ಆನೆ. ಇಂಥ ಸಮಯದಲ್ಲಿ ಕೊಣವೇ ಸರಿ, ಅದೂ ಮಳೆ ಬಂದಾಗ ನಡೆಯುವ ಕೋಣ. ಕಷ್ಟಪಟ್ಟು ATM ತನಕ ದೂಡಿದೆ, ಯಾಕೆ ಬೇಕಿತ್ತು ಕಷ್ಟ, ೧೫ ರೂಪಾಯಿ ಹೆಚ್ಚು ಕೊಟ್ಟಿದ್ದರೆ ಇಷ್ಟೆಲ್ಲ ರಗಳೆಯೇ ಇರುತ್ತಿರಲಿಲ್ಲ, ಆದರೆ ಈಗ ವಿಧಿಯಿಲ್ಲ.

ಅಲ್ಲೇ ಗಾಡಿ ನಿಲ್ಲಿಸಿ, ATMನಿಂದ ದುಡ್ಡು ತೆಗೆದು ಆಟೋಗೆ ಕಾದು ನಿಂತೆ. ಪುಣ್ಯಕ್ಕೆ ಆಟೋ ಸಿಕ್ತು, ರೋಡಿನಲ್ಲಿ ಆಟೋ ಸಿಗಿವುದೆಂದರೆ, ಪುಕ್ಕಟೆಯಾಗಿ ಪುಣ್ಯ ಬಂದಂತೆ. ಆಟೋದವನು ಮೀಟರ್ ಹಾಕಲಿಲ್ಲ. ಕೇಳಿದ್ದಕ್ಕೆ, ಕೊಡಿ ಸಾರ್, ನಿಮಗೆ ಗೊತ್ತಲ್ಲ ಅಂದ ಯಾವುದೋ ಫೋನಿನ ಸಂಭಾಷಣೆ ನಡುವೆ. ಫೋನ್ ಇಟ್ಟ ನಂತರ ತಾನೇ ಮಾತು ಶುರು ಮಾಡಿದ. ತನ್ನ ಮಗಳನ್ನು ಭರತನಾಟ್ಯಕ್ಕೆ ಸೇರಿಸಿದ್ದಾನಂತೆ, ಅಲ್ಲಿ ಶುಲ್ಕ ಕೊಡುವುದು ತಡವಾಗಿದ್ದಕ್ಕೆ ಹೆಚ್ಚುವರಿ ಹಣ ಕೇಳಿದರಂತೆ. ನೋಡಿ ಸಾರ್, ನಾವಿಲ್ಲಿ ದುಡ್ಡು ಕಿತ್ತರೆ, ನಮ್ಮಿಂದ ಇನ್ನೊಬ್ಬರು ಆಗಲೇ ರೆಡಿ ಅಂದ. ಆಹಾ ಆಟೋದವರ ಬಾಯಲ್ಲಿ ನ್ಯಾಯದ ಮಾತೆ? ಸರಿ ಅವನಿಗೆ ೨೫ ರೂಪಾಯಿ ಕೊಟ್ಟು ಇಳಿದೆ. ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇತ್ತು. ಅವರ ಬಳಿಯೇ ಇದ್ದ ಒಂದು ಖಾಲಿ ಬಾಟಲ್ ತೆಗೆದುಕೊಂಡು ಅದರ ತುಂಬಾ ಪೆಟ್ರೋಲ್ ತುಂಬಿಸಿಕೊಂಡೆ. ಸಧ್ಯ ಬಾಟಲ್ ಇತ್ತು, ಇಲ್ಲಾಂದರೆ ಒಂದು ಬಿಸ್ಲೇರಿಗೆ ಹಣ ತೆತ್ತಬೇಕಾಗಿತ್ತು. ಮತ್ತೆ ಇನ್ನೊಂದು ಆಟೋ ಹಿಡಿದು(ಮತ್ತೊಮ್ಮೆ ಪುಣ್ಯ ಮಾಡಿದ್ದೆ), ಬೈಕ್ ಬಳಿ ಬಂದು ೨೫ ರೂಪಾಯಿ ಕೊಟ್ಟು ಇಳಿದೆ. ಪೆಟ್ರೋಲ್ ಬಗ್ಗಿಸಿ, ಒಮ್ಮೆ ಒದ್ದು, ಹೊರಟೆ. ದಾರಿಯಲ್ಲಿ ಖಾಲಿ ಬಾಟಲ್ ಕೊಟ್ಟು, ಇನ್ನೂ ಒಂದಿಷ್ಟು ಪೆಟ್ರೋಲ್ ಹಾಕಿಸಿ ಆಫೀಸಿಗೆ ಹೊರಟೆ. ೧೫ ರೂಪಾಯಿ ಉಳಿಸಲು, ಎಷ್ಟೆಲ್ಲ ಶ್ರಮ, ಹೆಚ್ಚುವರಿ ಹಣ ಪೋಲು ಮಾಡಿದೆ.

ಇದು ಬರೀ ಇವತ್ತಿನ ಕಥೆಯಲ್ಲ. ಪ್ರತೀ ಬಾರಿಯೂ ಅಷ್ಟೇ, ಏನೋ ಉಳಿಸಲು ಹೋಗಿ ಇನ್ನೆನನ್ನೋ ತೆತ್ತು ಬಂದಿರುತ್ತೀನೀ.
ಈ ಕ್ರೆಡಿಟ್ ಕಾರ್ಡುಗಳದ್ದೂ ಇದೆ ಕಥೆ. ಕೈಯಲ್ಲಿ ದುಡ್ಡಿದ್ದರೂ, ಏನೋ ಶೋಕಿ, ಕಾರ್ಡ್ ಬಳಸಿ ಬಿಡುತ್ತೀನಿ. ಶೋಕಿ ಅಂತಲ್ಲ, ಅದನ್ನು ಉಜ್ಜಿದರೆ ಇಂತಿಷ್ಟು ಅಂಕಗಳು ಸಿಗುತ್ತದೆ, ಆಮೇಲೆ ಅದರಿಂದ ಬೇರೇನಾದರೂ ತೋಗೋಬಹುದು ಅಂತ. ಸರಿ ಕಾರ್ಡ್ ಉಜ್ಜಿದ ತಕ್ಷಣ ಕೈಲಿರುವ ಹಣವನ್ನಾದರೂ ಬ್ಯಾಂಕ್‌ಗೆ ಕಟ್ಟುತ್ತೀನಾ, ಅದೂ ಇಲ್ಲ. ಕಟ್ಟುವ ಮುಂಚೆಯೇ, ಯಾವುದೋ ಮಾಯದಲ್ಲಿ ನಾನೇ ಖರ್ಚು ಮಾಡಿ ಬಿಟ್ಟಿರುತ್ತೀನಿ. ಸರಿ, ಈಗ ಆ ಕಾರ್ಡಿನ ಹಣ ಕೊಡುವುದಕ್ಕೆ ಬೇರೆ ಮಾರ್ಗ ಹುಡುಕಬೇಕು. ಕೆಡಿಮೆ ಕಟ್ಟುವುದಾದರೆ, ಸಂಬಳ ಬಂದ ತಕ್ಷಣ ಕಟ್ಟಿಬಿಡಬಹುದು. ಇಲ್ಲಾಂದ್ರೆ? ಇಲ್ಲಾಂದ್ರೆ ಏನು, ಇದಿಯಲ್ಲಾ ಸುಲಭ ಕಂತುಗಳು.
ಅದೂ ಸುಲಭ ಅಲ್ಲ, ಅದಕ್ಕೆ ಬಡ್ಡಿ ಕಟ್ಟಬೇಕು, ಸಂಸ್ಕರಣಾ ಶುಲ್ಕ ಕಟ್ಟಬೇಕು. ಆಯ್ತಲ್ಲ ಒಂದಕ್ಕೆ ಹತ್ತು ಪಟ್ಟು ಹೆಚ್ಚು ಖರ್ಚು. ಆದರೂ, ಈಗಲೂ ಕಾರ್ಡ್ ಬಳಸುವುದೇ ಹೆಚ್ಚು ಉಪಯುಕ್ತ ಎಂದೆನಿಸುತ್ತದೆ.

ಯಾವುದಾದರೂ ಮಾಲ್ಗಳಿಗೆ ಹೋದಾಗಲೂ ಅಷ್ಟೇ, ಚನ್ನಾಗಿ ಸುತ್ತಾಡಿ, ಕೊನೆಯಲ್ಲಿ ಏನಾದರೂ ತಿನ್ನೋಣವೆಂದರೆ ಅಲ್ಲಿ ಒಂದಕ್ಕೆ ಹತ್ತು ಪಟ್ಟು ಕೊಡಬೇಕು. ಹೆಂಡತಿ ಮಕ್ಕಳಿಗೆ ಬಟ್ಟೆ ಬರೆ ಕೊಂಡು, ಜೊತಗೆ ಬೇಕಿದ್ದೋ ಬೇಡದಿದ್ದೋ ಒಂದಷ್ಟು ಸರಕು ತೆಗೆದುಕೊಂಡ ನಂತರ, ಅಲ್ಲಿ ಊಟಕ್ಕೆ ಹೆಚ್ಚು ಕೊಡುವುದು ಯಾಕೋ ಮನಸಾಗುವುದಿಲ್ಲ. ಒಂದು ದೋಸೆಗೆ ೯೦ ರೂಪಾಯಿ ಕೊಡಲು ಯಾಕೋ ಹಿಂದೇಟು, ಹೇಗೋ ಒಪ್ಪಿಸಿ, ಹೊರಗೆ ತಿನ್ನೋಣವೆಂದು ಮಾಲ್ ನಿಂದ ಹೊರಬಂದು ಮನೆಯ ದಾರಿಯಲ್ಲಿ ಯಾವುದೇ ಒಳ್ಳೆಯ ಹೋಟೆಲ್‌ಗಳು ಸಿಗದಿದ್ದರೆ ನನ್ನ ಪಾಡು ಯಾರಿಗೂ ಬೇಡ. ಹೆಂಡತಿಯ ಸಿಟ್ಟು ತಾನಾಗೇ ಹೊರ ಬಂದಿರುತ್ತದೆ. ಅಮ್ಮನಿಗೂ ಮನೆಯಲ್ಲಿ ಏನಾದರೂ ಮಾಡಲು ಬೇಜಾರು. ಸರಿ ಮತ್ತೇನು ಮಾಡುವುದು? ನಾನೇ ಬೈಕಿನಲ್ಲಿ ಹೊರಗೆ ಹೋಗಿ ಏನಾದರೂ ತರಬೇಕು. ಇಲ್ಲ ಮನೆಗೇ ಏನಾದರೂ ತರಿಸೊಣ ಎಂದರೆ, ಪೀಜ಼ಾ ಬಿಟ್ಟು ಬೇರೆ ಏನೂ ಮನೆಗೆ ತಂದು ಕೊಡುವ ಸೌಲಭ್ಯವಿಲ್ಲ. ಸರಿ, ಪೀಜ಼ಾ ತರಿಸಲೇ ಬೇಕು, ಅದು ನೂರಿನೂರಕ್ಕೆ ಮುಗಿಯವ ಕೆಲಸವಲ್ಲ, ಅದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಕೊಡಲೇ ಬೇಕು, ಜೊತೆಗೆ ತಂದು ಕೊಟ್ಟವನಿಂಗೆ ಒಂಚೂರು ಭಕ್ಷೀಸು. ಅಮ್ಮ ಪೀಜ಼ಾ ತಿನ್ನುವುದಿಲ್ಲ ಅನ್ನೋ ಕಾರಣಕ್ಕೆ ಮತ್ತೆ ಬೈಕು ಏರಿ ಏನಾದರೂ ತರಬೇಕು.

ಹೀಗೆ ಎಲ್ಲೋ ಏನೋ ಉಳಿಸಲು ಹೋಗಿ, ಅದಕ್ಕಿಂತ ಹೆಚ್ಚು ಖರ್ಚು ಮಾಡಿಯಾಗಿರುತ್ತದೆ.
ಬಹುಷಃ ಇದು ನನ್ನೊಬ್ಬನದೇ ಕಥೆಯಲ್ಲ, ಬಹಳಷ್ಟು ಮಂದಿಯದು ಇದೇ ಹಣೆಬರಹ...

ಆದರೂ, ಆ ಎಲ್ಲ ಕ್ಷಣಗಳನ್ನು ಆನಂದಿಸುವುದು ಬಹಳ ಮುಖ್ಯ. ಇಷ್ಟು ಖರ್ಚು ಮಾಡಿದ್ದರೂ, ಮುಖದಲ್ಲಿನ ಮಂದಹಾಸಕ್ಕೇನು ಕಡಿಮೆ ಇಲ್ಲ, ಅದೂ ಅಲ್ಲದೆ, ಇಷ್ಟು ಖರ್ಚು ಮಾಡಿರದಿದ್ದರೆ, ಇದನ್ನು ಬರೆಯುವ ಅವಕಾಶವೂ ಇರುತ್ತಿರಲಿಲ್ಲ.